ಭೈರನಹಟ್ಟಿಯಲ್ಲಿ ಇಂದು ಭುವನೇಶ್ವರಿ ರಥೋತ್ಸವ

KannadaprabhaNewsNetwork |  
Published : Nov 01, 2025, 02:30 AM IST
(31ಎನ್.ಆರ್.ಡಿ4 ಕನ್ನಡ ರಥೋತ್ಸವ ಪೋಟೋ ಹಾಗೂ ಶ್ರೀಗಳ ಪೋಟೋ.) | Kannada Prabha

ಸಾರಾಂಶ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ನ. 1ರಂದು ತಾಯಿ ಭುವನೇಶ್ವರಿ ಪಂಚಲೋಹದ ಮೂರ್ತಿಯನ್ನಿರಿಸಿ ರಥೋತ್ಸವ ನಡೆಯುತ್ತದೆ. ಸಾವಿರಾರು ಜನರು ಭಾಗಿಯಾಗುತ್ತಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ನ. 1ರಂದು ತಾಯಿ ಭುವನೇಶ್ವರಿ ಪಂಚಲೋಹದ ಮೂರ್ತಿಯನ್ನಿರಿಸಿ ರಥೋತ್ಸವ ನಡೆಯುತ್ತದೆ. ಸಾವಿರಾರು ಜನರು ಭಾಗಿಯಾಗುತ್ತಾರೆ.

ಅಷ್ಟೇ ಅಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ಮಠದ ಆವರಣದಲ್ಲಿ ನಿತ್ಯ ಕನ್ನಡ ಬಾವುಟ ಹಾರಾಡುತ್ತದೆ. ಭುವನೇಶ್ವರಿಯ ಪಂಚಲೋಹದ ಮೂರ್ತಿ ಇರಿಸಲಾಗಿದ್ದು, ನಿತ್ಯ ಪೂಜಿಸಲಾಗುತ್ತದೆ.

ಈ ಮಠದಲ್ಲಿ ಧಾರ್ಮಿಕ ಸೇವೆಗಳ ಜತೆಗೆ ಕನ್ನಡ ಸೇವೆ ನಿರಂತರವಾಗಿ ನಡೆಯುತ್ತಿದೆ. ಕನ್ನಡದ ಕಟ್ಟಾಳು ಶಾಂತಲಿಂಗ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಕ್ರಮದ ಜತೆಗೆ ಭಾಷೆ, ನೆಲ-ಜಲದ ಕುರಿತು ಸದ್ದಿಲ್ಲದೇ ನಿರಂತರ ಕೆಲಸ ಮಾಡುತ್ತಿದ್ದಾರೆ.

ಸಣ್ಣ ಗ್ರಾಮ: ಭೈರನಹಟ್ಟಿ ಸಣ್ಣ ಗ್ರಾಮ. ಆದರೆ ಕನ್ನಡ ಎಂದ ಕೂಡಲೇ ನೆನಪಾಗುವುದು ಈ ಗ್ರಾಮ. ದೊರೆಸ್ವಾಮಿ ವಿರಕ್ತಮಠದಲ್ಲಿ ಏಕೀಕರಣ ಹೋರಾಟಗಾರರ ಪರಿಚಯಿಸುತ್ತ ವರ್ಷಪೂರ್ತಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಜತೆಗೆ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯವೂ ಆಗುತ್ತಿದೆ. ಸಾಹಿತಿಗಳನ್ನು, ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ.

ಶಾಂತಲಿಂಗ ಶ್ರೀಗಳು ಶಿವಯೋಗಿ ಸಾಧಕರಲ್ಲಿ ಒಬ್ಬರು. ಸುಮಾರು ಒಂದೂವರೆ ದಶಕಗಳ ಕಾಲ ಶ್ವೇತ ವಸ್ತ್ರಧಾರಿಯಾಗಿಯೇ ಸಮಾಜಕ್ಕಾಗಿ ದುಡಿದವರು. ಬಳಿಕ ಕಾವಿಧಾರಿಯಾಗಿ ತಮ್ಮ ಕಾರ್ಯ ಮುಂದುವರಿಸಿದ್ದಾರೆ.

ಹಲವಾರು ಪುಸ್ತಕಗಳ ರಚನೆ: ಶ್ರೀಗಳು ಸಾಹಿತಿಗಳೂ ಹೌದು. ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಶ್ರೀಮಠದಲ್ಲಿ ಸಿಂದಗಿ ಶ್ರೀ ಶಾಂತವಿರೇಶ್ವರ ಗ್ರಂಥಾಲಯ ಸ್ಥಾಪಿಸಿ, ಜನರಲ್ಲಿ ಓದುವ ಹವ್ಯಾಸ ಬೆಳೆಸುವ ಜತೆಗೆ ಪುಸ್ತಕ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಗಳು ಉಚಿತ ಪ್ರಸಾದ ನಿಲಯ ಸ್ಥಾಪಿಸಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ, ಸಂಸ್ಕೃತಿ-ಸಂಸ್ಕಾರ ಕಲಿಸುತ್ತಾ ಬಡಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ. ಇಲ್ಲಿ ಅಧ್ಯಯನಗೈದ ವಿದ್ಯಾರ್ಥಿಗಳು ಕೃಷಿ, ಸರ್ಕಾರಿ ಸೇವೆ ಮಾಡಿದರೆ, ಕೆಲವರು ಕಾವಿದೀಕ್ಷೆ ಪಡೆದು ಮಠಾದೀಶರಾಗಿದ್ದಾರೆ. ಸದ್ಯ ನೂರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಶ್ರೀಮಠದೊಂದಿಗೆ ಗಣ್ಯರ ನಂಟು: ನಾಡಿನ ಶ್ರೇಷ್ಠ ಪತ್ರಕರ್ತರಾಗಿದ್ದ ಪಾಟೀಲ ಪುಟ್ಟಪ್ಪ, ಭಾವೈಕ್ಯ ಕವಿ ಇಬ್ರಾಹಿಂ ಸುತಾರ, ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟಿ, ಹಿರಿಯ ಸಾಹಿತಿ ಜ್ಞಾನದೇವ ದೊಡ್ಡಮೇಟಿ ಹಾಗೂ ಕಾರ್ಮಿಕ ನೇತಾರ ಡಾ. ಕೆ.ಎಸ್. ಶರ್ಮಾ ಸೇರಿದಂತೆ ಅನೇಕ ಗಣ್ಯರು ಶ್ರೀಮಠದ ನಿಕಟ ಸಂಪರ್ಕ ಹೊಂದಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನ. 1ರಂದು ಬೆಳಗ್ಗೆ ಶ್ರೀ ಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸಲಿದ್ದು, ಕನ್ನಡಪರ ಚಿಂತಕರಾದ ಹುಬ್ಬಳ್ಳಿಯ ರವೀಂದ್ರ ದೊಡ್ಡಮೇಟಿ ಕನ್ನಡ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಬಿ.ಆರ್. ಯಾವಗಲ್ ಉಪಸ್ಥಿತರಿರುವರು. ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ನೂರಾರು ಕನ್ನಡಿಗರು ಆಗಮಿಸಲಿದ್ದಾರೆ. ಧಾರವಾಡ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಡಾ. ವೈ.ಎಂ. ಯಾಕೊಳ್ಳಿ ಅವರು ತ್ರಿಪದಿ ಸಾಹಿತ್ಯಕ್ಕೆ ಸರ್ವಜ್ಞನ ಕೊಡುಗೆ ವಿಷಯವಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ