ಹಿಂದೂಸ್ತಾನಿ ಸಂಗೀತದ ಅಪ್ಪಟ ಪ್ರೇಮಿ ಭೈರಪ್ಪ!

KannadaprabhaNewsNetwork |  
Published : Sep 25, 2025, 01:00 AM IST
24ಡಿಡಬ್ಲೂಡಿ112024ರ ಸೆ. 20ರಂದು ಧಾರವಾಡದ ಶಶಿಧರ ನರೇಂದ್ರ ಅವರ ಮನೆಗ ಆಗಮಿಸಿದ ಕ್ಷಣ. | Kannada Prabha

ಸಾರಾಂಶ

ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಫಿಲಾಸಫಿ ಹಾಗೂ ಲಾಜಿಕ್‌ ವಿಷಯಗಳ ಪಾಠ ಮಾಡುತ್ತಿದ್ದ ಭೈರಪ್ಪನವರು, 1960ರ ದಶಕದಲ್ಲಿ ಗಂಗೂಬಾಯಿ ಹಾನಗಲ್‌ ಅವರ ಬಳಿ ಸಂಗೀತ ಸಹ ಕಲಿತಿದ್ದಾರೆ.

ಧಾರವಾಡ:

ಮೈಸೂರಿನಲ್ಲಿ ತಮ್ಮ ಸ್ನೇಹಿತರನ್ನು ರೈಲಿಗೆ ಬಿಟ್ಟು ಮರಳುವಾಗ ನಿಲ್ದಾಣದ ಸಮೀಪದಲ್ಲಿ ಕೇಳಿ ಬಂದ ಸಂಗೀತದ ಧ್ವನಿ ಹುಡುಕಿ ಹೋಗುವ ಡಾ. ಎಸ್‌.ಎಲ್‌. ಭೈರಪ್ಪನವರು, ಅಂದಿನಿಂದ ಖ್ಯಾತ ಸಂಗೀತಗಾರ್ತಿ ಡಾ. ಗಂಗೂಬಾಯಿ ಹಾನಗಲ್‌ ಅವರ ಸಂಗೀತ ಪ್ರೇಮಿಯಾಗಿ ಬಿಡುತ್ತಾರೆ..!

ಡಾ. ಗಂಗೂಬಾಯಿ ಹಾನಗಲ್‌, ಮಲ್ಲಿಕಾರ್ಜುನ ಮನಸೂರ ಸೇರಿದಂತೆ ಹಿಂದೂಸ್ತಾನಿ ಸಂಗೀತ ಕೇಳಲು ಅನೇಕ ಬಾರಿ ಹುಬ್ಬಳ್ಳಿ ಹಾಗೂ ಧಾರವಾಡಕ್ಕೆ ಆಗಮಿಸಿದ್ದಾರೆ ಭೈರಪ್ಪನವರು.

ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಫಿಲಾಸಫಿ ಹಾಗೂ ಲಾಜಿಕ್‌ ವಿಷಯಗಳ ಪಾಠ ಮಾಡುತ್ತಿದ್ದ ಭೈರಪ್ಪನವರು, 1960ರ ದಶಕದಲ್ಲಿ ಗಂಗೂಬಾಯಿ ಹಾನಗಲ್‌ ಅವರ ಬಳಿ ಸಂಗೀತ ಸಹ ಕಲಿತಿದ್ದಾರೆ. ಹಾರ್ಮೋನಿಯಂದೊಂದಿಗೆ ಹಾಡು ಹಾಗೂ ಶಾಸ್ತ್ರೀಯ ಸಂಗೀತದ ಆಲಾಪಗಳನ್ನು ಬೈರಪ್ಪನವರು ಮಾಡುತ್ತಿದ್ದರು ಎಂಬುದನ್ನು ನಾಟಕಕಾರ, ರಂಗ ನಿರ್ದೇಶಕರೂ ಆದ ಡಾ. ಶಶಿಧರ ನರೇಂದ್ರ ಅವರು ಡಾ. ಎಸ್‌.ಎಲ್. ಭೈರಪ್ಪನವರ ಧಾರವಾಡ ನಂಟಿನ ಬಗ್ಗೆ ಸ್ಮರಿಸುತ್ತಾರೆ.

ಸಂಗೀತ, ಸಂಸ್ಕೃತ ಕಲಿತರು:

ತಮ್ಮ ಉಪನ್ಯಾಸದ ವೃತ್ತಿಯೊಂದಿಗೆ ಸಂಗೀತ ಹಾಗೂ ಶ್ರೀನಿವಾಸ ತೋಪಖಾನೆ ಅವರಿಂದ ಸಂಸ್ಕೃತ ಸಹ ಕಲಿತಿದ್ದಾರೆ. 80ರ ದಶಕದಲ್ಲಿ ಧಾರವಾಡದ ಕಲಾಭವನದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳಲ್ಲಿ ಭೈರಪ್ಪನವರು ಹಿಂದಿನ ಸಾಲಿನಲ್ಲಿ ಕುಳಿತು ಸಂಗೀತ ಕೇಳುತ್ತಿದ್ದರು.

1998ರ ಡಿ. 5ರಂದು ಧಾರವಾಡದ ಡಯಟ್‌ ಪ್ರಾರ್ಥನಾ ಮಂದಿರದಲ್ಲಿ ಸಂಸ್ಕಾರ ಭಾರತಿ ಮೊದಲ ಸಮಿತಿಯ ಉದ್ಘಾಟನೆ ನೆರವೇರಿಸಿದ ಅವರು, ಒಂದೂ ಗಂಟಗೂ ಹೆಚ್ಚು ಕಾಲ ಭಾರತೀಯ ಸಂಸ್ಕೃತಿ ವಿಷಯದ ಉಪನ್ಯಾಸ ಮಾಡಿದ್ದು ನನ್ನ ಸ್ಮರಣೆಯಲ್ಲಿದೆ.

ಧಾರವಾಡ ಆಕಾಶವಾಣಿಯ ಕಾರ್ಯ ನಿರ್ವಹಕರಾಗಿದ್ದ, ಮೈಸೂರಿನವರಾದ ಎಂ.ಎಸ್‌.ಕೆ. ಪ್ರಭು, ಭೈರಪ್ಪನವರ ಪ್ರತಿಯೊಂದು ಕಾದಂಬರಿಯ ಹಸ್ತಪ್ರತಿ ಓದಿದ ನಂತರ ಮುದ್ರಣಕ್ಕೆ ಹೋಗುತ್ತಿತ್ತು. ಹೀಗಾಗಿಯೇ ಭೈರಪ್ಪನವರು ತಮ್ಮ ಆತ್ಮಕಥೆಯಲ್ಲಿ ಎಂ.ಎಸ್‌.ಕೆ ಪ್ರಭು ಅವರನ್ನು ಸ್ಮರಿಸಿದ್ದಾರೆ.

ಸಾಹಿತ್ಯ ಸಂಭ್ರಮದ ನಂಟು:

ಇನ್ನು, ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮ ಎಂಬ ಐತಿಹಾಸಿಕ ಸಮಾವೇಶದಲ್ಲಿ ಯು.ಆರ್‌. ಅನಂತಮೂರ್ತಿ ಹಾಗೂ ಎಸ್‌.ಎಲ್‌. ಭೈರಪ್ಪನವರು ಅಕ್ಕಪಕ್ಕ ಕೂತು ಹಸ್ತಲಾಘವ ಮಾಡಿದ್ದು ಇತಿಹಾಸ. ಸಂಭ್ರಮದಲ್ಲಿ ಸಾಹಿತ್ಯಾಸಕ್ತರೊಂದಿಗೆ ಭೈರಪ್ಪನವರು ಸಂವಾದ ಮಾಡಿದ್ದರು. 2024ರ ಸೆ. 20ರಂದು ಭೈರಪ್ಪನವರು ಕೊನೆಯದಾಗಿ ನಮ್ಮನೆಗೆ ಬಂದಿದ್ದರು. ಅವರ ಎಲ್ಲ ಕಾದಂಬರಿಗಳನ್ನು ಎರಡ್ಮೂರು ಬಾರಿ ಓದಿದ ನಾನು ನಮ್ಮ ತಂದೆ-ತಾಯಿಯಂತೆ ಅವರ ಕಟ್ಟಾ ಅಭಿಮಾನಿ. ಅವರ ನಿಧನ ಕನ್ನಡ ಕಾದಂಬರಿ ಪರಂಪರೆಯ ಯುಗಾಂತ್ಯ ಎಂದೇ ವಿಶ್ಲೇಷಿಸಬಹುದು ಎನ್ನುತ್ತಾರೆ ಡಾ. ಶಶಿಧರ ನರೇಂದ್ರ. ಭೈರಪ್ಪನವರ ಸಾವು ನೋವು ತಂದಿದೆ. ಹುಬ್ಬಳ್ಳಿಯ ಹೋಟೆಲ್‌ವೊಂದರಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ ಅವರು ಶ್ರೀಮಂತಿಕೆಯಲ್ಲಿ ಬೆಳೆದರು. ಅನ್ಯ ಭಾಷೆಗಳಿಗೆ ಕನ್ನಡದ ಕಾದಂಬರಿ ನೀಡಿದವರು. ಬದುಕಿನ ಅನೇಕ ವಿಷಯಗಳನ್ನು ವರ್ಷಗಟ್ಟಲೇ ಹುಡುಕಿ ಕಾದಂಬರಿಗಳನ್ನು ಬರೆದು ಯಶಸ್ವಿಯಾದವರು. ಅವರ ಜ್ಞಾನಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಏಕೆ ಬರಲಿಲ್ಲ ಗೊತ್ತಿಲ್ಲ. ರಾಜಕೀಯ ವಿಚಾರಗಳು ಕೂಡ ಇದಕ್ಕೆ ಕಾರಣವಿರಬಹುದು.ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಹಿರಿಯ ಕವಿ, ಧಾರವಾಡಡಾ. ಎಸ್.ಎಲ್. ಭೈರಪ್ಪನವರು ತಮ್ಮ ಸಾಹಿತ್ಯ ಕೃಷಿಯಿಂದ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದವರು. ಸಾಹಿತ್ಯ ಲೋಕದ ಪಂಡಿತರು ಅಲ್ಲದೇ ಮಧ್ಯಮ ವರ್ಗದ ಜನರನ್ನು ಕೂಡ ಆಕರ್ಷಿಸುವ ಬರವಣಿಗೆ ಅವರಿಗೆ ಸಿದ್ಧಿಸಿತ್ತು. ಈಗ ಹಿರಿಯ ಚೇತನವೊಂದು ಕಣ್ಮರೆ ಆದಂತಾಗಿದೆ.ಅರವಿಂದ ಬೆಲ್ಲದ, ಪ್ರತಿಪಕ್ಷ ಉಪನಾಯಕರು, ವಿಧಾನಸಭೆ

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ