ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಸಂತೇ ಶಿವರ ಏತ ನೀರಾವರಿ ಯೋಜನೆಯ ರೂವಾರಿಗಳಾದ ಸಾಹಿತಿ ದಿವಂಗತ ಎಸ್ ಎಲ್ ಭೈರಪ್ಪನವರ ಯೋಜನೆಗೆ ಹೆಸರಿಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಮನವಿ ನೀಡಲಾಗಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.ಸಂತೇ ಶಿವರ ಏತ ನೀರಾವರಿ ಯೋಜನೆ ಮೂಲಕ ಹೋಬಳಿಯ ಸಂತೇ ಶಿವರ ಗ್ರಾಮದ ದೊಡ್ಡಕೆರೆ ಸಂಪೂರ್ಣ ತುಂಬಿ ಕೊಡಿ ಬಿದ್ದ ಹಿನ್ನೆಲೆಯಲ್ಲಿ ಭೈರಪ್ಪನವರ ಪುತ್ರ ಉದಯ್ ಶಂಕರ್ ಜೊತೆಗೂಡಿ ಗಂಗೆಪೂಜೆ, ದೋಣಿಯ ಮೂಲಕ ಕೆರೆಗೆ ಬಾಗಿನ ಅರ್ಪಿಸಿದರು. ಯೋಜನೆಯನ್ನು ಮಂಜೂರು ಮಾಡಿಸಿದ್ದು ಎಸ್ ಎಲ್ ಭೈರಪ್ಪನವರು, ತನ್ನ ಹುಟ್ಟೂರಿನ ರೈತರಿಗೆ ಶಾಶ್ವತವಾದ ಯೋಜನೆ ರೂಪಿಸುವ ಸಲುವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 25 ಕೋಟಿ ರು. ಅನುದಾನ ಬಿಡುಗಡೆ ಮಾಡಿಸುವ ಮೂಲಕ ಸಂತೇ ಶಿವರ ಏತ ನೀರಾವರಿ ಯೋಜನೆಗೆ ಅನುದಾನ ತಂದರು ಇದರಿಂದ ಇಂದು ಗ್ರಾಮದ ಕೆರೆ ಅವರ ಕನಸಿನ ಯೋಜನೆ ಮೂಲಕ ಸಂಪೂರ್ಣ ತುಂಬಿ ಕೋಡಿ ಬೀಳುವ ಮೂಲಕ ಅವರ ಕನಸು ನನಸಾಗಿದೆ ಎಂದರು.ಕಳೆದ ವರ್ಷ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ವರ್ಷ ಪೂರ್ವ ಹಂಗಾಮಿನಲ್ಲಿ ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಿ ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಅವರು ಬದುಕಿದ್ದ ಸಂದರ್ಭದಲ್ಲಿ ಗ್ರಾಮದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸುವ ಮೂಲಕ ಬೆಳ್ಳಿ ಪಲ್ಲಕ್ಕಿ ಉತ್ಸವದೊಂದಿಗೆ ಕರೆತಂದು ಅವರಿಂದ ಗಂಗೆ ಪೂಜೆ ನೆರವೇರಿಸಿ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಗಿತ್ತು ಎಂದರು. ಎಸ್ ಎಲ್ ಭೈರಪ್ಪ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಭವನಕ್ಕೆ ಸರ್ಕಾರ 5 ಕೋಟಿ ರು. ಅನುದಾನ ಘೋಷಣೆ ಮಾಡಿತ್ತು. ಆದರೆ ಕಾಮಗಾರಿ ಪ್ರಾರಂಭಗೊಂಡು ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲ್ಲಿಯವರೆಗೂ ಕೇವಲ 1 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಸುಮಾರು ಸರ್ಕಾರದಿಂದ 4 ಕೋಟಿ ಅನುದಾನ ಬಿಡುಗಡೆ ಆಗಬೇಕಾಗಿದೆ ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಿಗೂ ಮನವಿ ಮಾಡಲಾಗಿದೆ ಜೊತೆಗೆ ಅವರ ಹುಟ್ಟೂರಿನಲ್ಲಿ ಎಸ್ ಎಲ್ ಭೈರಪ್ಪನವರ ಸ್ಮಾರಕ ನಿರ್ಮಾಣ ಮಾಡುವಂತೆಯೂ ಒತ್ತಾಯ ಮಾಡಿದ್ದೇನೆ ಎಂದರು.ಗ್ರಾಮದ ದೊಡ್ಡಕೆರೆ ಏರಿ ದುರಸ್ತಿಗೆ ಹಾಗೂ ಕೆರೆಯ ಏರಿಯಾ ಕೆಳಬಾಗದಲ್ಲಿ ರಾಜ ಕಾಲುವೆ ನಿರ್ಮಾಣಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ. ಜೊತೆಗೆ ಗಂಗಾಧರೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ 3 ಲಕ್ಷ ಮತ್ತು ಬ್ರಹ್ಮಲಿಂಗೇಶ್ವರ ದೇವಾಲಯ ಅಭಿವೃದ್ಧಿಗೆ 5 ಲಕ್ಷ ರು. ಅನುದಾನ ಮತ್ತು ಗಂಗಮತಸ್ಥ ಜನಾಂಗದ ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಮುಂಬರುವ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್ ಎಲ್ ಭೈರಪ್ಪನವರ ಪತ್ನಿ ಸರಸ್ವತಿ ಎಸ್ ಎಲ್ ಭೈರಪ್ಪ, ಪುತ್ರ ಉದಯ ಶಂಕರ್, ಉದ್ಯಮಿ ಅಣತಿ ಯೋಗೇಶ್, ದುಗ್ಗೇನಹಳ್ಳಿ ವೀರೇಶ್, ತಾಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಚಿರಂಜೀವಿ, ಮುಖಂಡರಾದ ಕುಂಬಾರಹಳ್ಳಿ ರಮೇಶ್, ಜಯಲಿಂಗೇಗೌಡ, ಗಂಜಿಗೆರೆ ಕೆಂಪೇಗೌಡ, ಕುಳೇ ಗೌಡ, ದೊರೆಸ್ವಾಮಿ, ಪುಟ್ಟಸ್ವಾಮಿ, ಧನಂಜಯ್, ಹುಲಿಕೆರೆ ಸಂಪತ್ ಕುಮಾರ್, ಬೀರೇಗೌಡ, ಗುಡಿ ಗೌಡ್ರು ರವೀಶ್, ಗಿರೀಶ್, ಬಸವರಾಜು, ನಂಜುಂಡಪ್ಪ, ಆರ್ ಟಿ ಕುಮಾರ್, ಧನ್ಪಾಲ್, ಲೋಕೇಶ್, ಯಾಚನಘಟ್ಟ ಸಂತೋಷ್, ನವಿಲೇ ನವೀನ್, ಬೋರೇಗೌಡ, ದರ್ಶನ್, ಧ್ಯಾನ್, ಶಿವು, ನಾಗೇಶ್, ಸಿದ್ದಲಿಂಗ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.