ಕೆಎಸ್‌ಸಿಎನಲ್ಲಿ ಪಕ್ಷಪಾತ: ಪ್ರತಿಭಾವಂತ ಮಕ್ಕಳಿಗೆ ಅನ್ಯಾಯದ ಆರೋಪ

KannadaprabhaNewsNetwork |  
Published : Aug 10, 2024, 01:32 AM IST
ಕ್ರಿಕೆಟ್‌ ಆಯ್ಕೆ | Kannada Prabha

ಸಾರಾಂಶ

ಅಂಡರ್‌ 19ರ ಆಯ್ಕೆಯಲ್ಲಂತೂ ಪ್ರತಿಭಾವಂತ ಮಕ್ಕಳಿಗೆ ಭಾರೀ ಅನ್ಯಾಯ ಮಾಡಲಾಗಿದೆ. ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ, ಯಾರ್‍ಯಾರು ಅರ್ಹ ಮಕ್ಕಳಿದ್ದಾರೆ. ಅವರಿಗೆ ಯಾವ ರೀತಿ ಅನ್ಯಾಯವಾಗಿದೆ ಎಂಬುದನ್ನು ಮುಂದಿಟ್ಟುಕೊಂಡು ಕೋರ್ಟ್‌ ಮೊರೆ ಹೋಗಲು ಪಾಲಕರು ಸಿದ್ಧತೆ ನಡೆಸಿದ್ದಾರೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕ ಭಾಗದ 5 ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಇಲ್ಲಿನ ಕೆಎಸ್‌ಸಿಎ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ. ಧಾರವಾಡ ವಲಯ ಮಟ್ಟದ ಕ್ರಿಕೆಟ್‌ ತಂಡಕ್ಕೆ ಆಯ್ಕೆ ಮಾಡುವಲ್ಲಿ ಭಾರೀ ಗೋಲ್‌ಮಾಲ್‌ ಮಾಡಲಾಗುತ್ತಿದೆ. ಅರ್ಹರನ್ನು ಬಿಟ್ಟು, ಅನರ್ಹರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಆಯ್ಕೆ ವಿರುದ್ಧ ತಜ್ಞರೊಂದಿಗೆ ಚರ್ಚಿಸಿ ನ್ಯಾಯಾಲಯದ ಮೊರೆ ಹೋಗಲು ಪಾಲಕರು ಸಜ್ಜಾಗಿದ್ದಾರೆ. ಈ ನಡುವೆ ಮಕ್ಕಳಿಗೆ ಯಾವುದೇ ಬಗೆಯ ಅನ್ಯಾಯವಾಗಿಲ್ಲ. ನಿಯಮದ ಪ್ರಕಾರವೇ ಆಯ್ಕೆ ಮಾಡಲಾಗಿದೆ ಎಂದು ಕೆಎಸ್‌ಸಿಎ ಸ್ಪಷ್ಟಪಡಿಸಿದೆ.

ಏನಿದು?:

ಹುಬ್ಬಳ್ಳಿ ಕೆಎಸ್‌ಸಿಎಯು ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಹೀಗೆ 5 ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಇದಕ್ಕೆ ನಿಮಂತ್ರಕರಾಗಿ (ಕನ್ವೀನಿಯರ್‌) ನಿಖಿಲ ಭೂಸದ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ ವಲಯದ ತಂಡಗಳನ್ನು (ಅಂಡರ್‌ 14, 16,19 ಹಾಗೂ 23 ವಯೋಮಿತಿ) ಹುಬ್ಬಳ್ಳಿಯ ಕೆಎಸ್‌ಸಿಎ ಮಾಡುತ್ತದೆ. ಇಲ್ಲಿ ವಲಯ ಮಟ್ಟಕ್ಕೆ ಆಯ್ಕೆಯಾದ ತಂಡವೂ ಬೇರೆ ಬೇರೆ ವಲಯಗಳೊಂದಿಗೆ ಆಟವಾಡಿ ಅಲ್ಲಿ ತಮ್ಮ ಪ್ರತಿಭೆ ತೋರಿಸಿದ ಬಳಿಕ ರಣಜಿ ಸೇರಿದಂತೆ ವಿವಿಧ ಪಂದ್ಯಾವಳಿಗಳಿಗೆ ಕ್ರಿಕೆಟ್‌ ಪಟುಗಳು ಆಯ್ಕೆಯಾಗುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿ ನಡೆಯುವ ಎಲ್ಲ ಆಯ್ಕೆಯಲ್ಲೂ ತಮಗೆ ಬೇಕಾದವರನ್ನೇ ಆಯ್ಕೆ ಮಾಡಲಾಗುತ್ತಿದೆ. ನಿಜವಾದ ಪ್ರತಿಭಾವಂತ ಮಕ್ಕಳ ಭವಿಷ್ಯಕ್ಕೆ ತಣ್ಣೀರು ಎರೆಚುವ ಕೆಲಸವನ್ನು ಇಲ್ಲಿನ ಕನ್ವೀನಿಯರ್‌ ಮಾಡುತ್ತಿದ್ದಾರೆ ಎಂಬ ಆರೋಪ ಕ್ರಿಕೆಟ್‌ ಪ್ರೇಮಿಗಳು ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿನ ವಿವಿಧ ಕ್ರಿಕೆಟ್‌ ಅಕಾಡೆಮಿಗಳ ಆರೋಪ.

ಈಗ ಆಗಿರುವುದೇನು?:

ಅಂಡರ್‌ 16ರ ವಲಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ ಆ.12ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕಾಗಿ ಆ. 6ರಂದು 15+5 ಆಟಗಾರರಿರುವ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಆಯ್ಕೆಯೂ ನಿಷ್ಪಕ್ಷಪಾತವಾಗಿ ನಡೆದಿಲ್ಲ. ತಮಗೆ ಬೇಕಾದವರನ್ನೇ ನಿಖಿಲ ಭೂಸದ್‌ ಆಯ್ಕೆ ಮಾಡಿದ್ದಾರೆ. ಕೆಲವೊಂದು ಅಕಾಡೆಮಿಗಳ ಮಕ್ಕಳನ್ನು ಬೇಕಂತಲೇ ಕೈ ಬಿಡಲಾಗಿದೆ ಎಂಬ ಆಕ್ರೋಶ ಪಾಲಕರು ಹಾಗೂ ಅಕಾಡೆಮಿಗಳದ್ದು.

ಈ ನಡುವೆ ಕಳೆದ ತಿಂಗಳು ಅಂಡರ್‌ 23 ತಂಡದ ಆಯ್ಕೆಯಲ್ಲೂ ಇದೇ ರೀತಿ ಆಗಿತ್ತು. ಕಳೆದ ಎರಡು ವರ್ಷದಿಂದ ನಿಮಂತ್ರಕರಾಗಿ ಆಯ್ಕೆಯಾಗಿ ಬಂದ ಬಳಿಕ ಈ ರೀತಿ ಪಕ್ಷಪಾತ ನಡೆಯುತ್ತಿದೆ. ಇವರನ್ನು ಕಿತ್ತು ಹಾಕಿ ಒಳ್ಳೆಯ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವ ನಿಮಂತ್ರಕರನ್ನು ನೇಮಿಸಬೇಕು ಎಂಬ ಬೇಡಿಕೆಯನ್ನು ಇಲ್ಲಿನ ಕ್ರಿಕೆಟ್‌ ಅಕಾಡೆಮಿಗಳು ಮುಂದಿಟ್ಟಿವೆ. ಈ ಸಂಬಂಧ ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ ಕೆಲವರು ದೂರನ್ನು ಕೂಡ ಕೊಟ್ಟಿರುವುದುಂಟು.

ನ್ಯಾಯಾಲಯದ ಮೊರೆ?:

ಅಂಡರ್‌ 19ರ ಆಯ್ಕೆಯಲ್ಲಂತೂ ಪ್ರತಿಭಾವಂತ ಮಕ್ಕಳಿಗೆ ಭಾರೀ ಅನ್ಯಾಯ ಮಾಡಲಾಗಿದೆ. ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ, ಯಾರ್‍ಯಾರು ಅರ್ಹ ಮಕ್ಕಳಿದ್ದಾರೆ. ಅವರಿಗೆ ಯಾವ ರೀತಿ ಅನ್ಯಾಯವಾಗಿದೆ ಎಂಬುದನ್ನು ಮುಂದಿಟ್ಟುಕೊಂಡು ಕೋರ್ಟ್‌ ಮೊರೆ ಹೋಗಲು ಪಾಲಕರು ಸಿದ್ಧತೆ ನಡೆಸಿದ್ದಾರೆ.

ನಮ್ಮ ಪಾತ್ರವಿಲ್ಲ:

ತಂಡದ ಆಯ್ಕೆಯನ್ನು ನಿಮಂತ್ರಕರು ಮಾಡಲ್ಲ. ಮಾಜಿ ಕ್ರಿಕೆಟ್ ಆಟಗಾರರು ಮಾಡುತ್ತಾರೆ. ಬೆಂಗಳೂರಿನಿಂದ ವೀಕ್ಷಕರಾಗಿ ಒಬ್ಬರು ಬಂದಿರುತ್ತಾರೆ. ನಾವು ಬರೀ ಹಿಂದಿನ ಮ್ಯಾಚ್‌ಗಳ ಡಾಟಾ ಕೊಟ್ಟಿರುತ್ತೇವೆ. ಅದರ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ನಮ್ಮ ಪಾತ್ರ ಇರಲ್ಲ ಎಂದು ಕೆಎಸ್‌ಸಿಎ ಸ್ಪಷ್ಟಪಡಿಸಿದೆ.

ನಾನು ಆಯ್ಕೆ ಕಮಿಟಿಯಲ್ಲಿಲ್ಲ: ಸವಡಿ

ಹುಬ್ಬಳ್ಳಿ ಕೆಎಸ್‌ಸಿಎ ಚೇರಮನ್‌ ಆಗಿ ವೀರಣ್ಣ ಸವಡಿ ಇದ್ದಾರೆ. ಆದರೆ ಇವರು ಆಯ್ಕೆ ಕಮಿಟಿಯಲ್ಲಿಲ್ಲ. ಆಯ್ಕೆ ಕಮಿಟಿಯಲ್ಲಿ ಚೇರಮನರ್‌ನ್ನು ಸೇರಿಸಿಕೊಳ್ಳುವುದು, ಬಿಡುವುದು ನಿಮಂತ್ರಕರಿಗೆ ಬಿಟ್ಟ ವಿಚಾರ. ಹಿಂದೆ ಬಾಬಾ ಭೂಸದ ಹಾಗೂ ಅವಿನಾಶ ನಿಮಂತ್ರಕರಾಗಿದ್ದಾಗ ಚೇರಮನ್‌ರನ್ನು ಆಯ್ಕೆ ಕಮಿಟಿಯಲ್ಲಿ ಸೇರಿಸಲಾಗಿತ್ತು. ಆದರೆ ಇದೀಗ ನಿಖಿಲ ಅವರು ಸೇರಿಸಿಕೊಂಡಿಲ್ಲ. ಈ ಕುರಿತು ಮಾತನಾಡಿದ ವೀರಣ್ಣ ಸವಡಿ, ನಾನು ಆಯ್ಕೆ ಕಮಿಟಿಯಲ್ಲಿ ಇಲ್ಲ. ಆದರೆ ಮಕ್ಕಳು ಆಯ್ಕೆಯಾಗದಿದ್ದರೆ ಅವರನ್ನು ಯಾಕೆ ಕೈ ಬಿಡಲಾಗಿದೆ ಎಂಬುದನ್ನು ಕಮಿಟಿ ಸ್ಪಷ್ಟಪಡಿಸಬೇಕು. ಆ ಕೆಲಸ ಇಲ್ಲಿ ಆಗಿಲ್ಲ. ಹೀಗಾಗಿ ಸಹಜವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.ಕೆಎಸ್‌ಸಿಎ ನಿಮಂತ್ರಕರಾಗಿರುವ ನಿಖಿಲ ಭೂಸದ ತಮಗೆ ಬೇಕಾದವರನ್ನಷ್ಟೇ ಆಯ್ಕೆ ಮಾಡಿದ್ದಾರೆ. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಭಾರೀ ಅನ್ಯಾಯವಾಗಿದೆ. ಇವರು ನಿಮಂತ್ರಕರಾಗಿ ಬಂದ ಬಳಿಕ ಬರೀ ಪಕ್ಷಪಾತ ನಡೆಯುತ್ತಿದೆ. ಈ ಬಗ್ಗೆ ಕೆಎಸ್‌ಸಿಎ ರಾಜ್ಯ ಸಮಿತಿಗೆ ದೂರು ನೀಡಲಾಗುವುದು ಎಂದು ದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿ ದಯಾನಂದ ಶೆಟ್ಟಿ ಹೇಳಿದರು.

ನಾನು ಹಿಂದಿನ ಮ್ಯಾಚ್‌ಗಳ ಫಲಿತಾಂಶದ ಆಧಾರದ ಮೇಲೆ ಆಟಗಾರರ ಡಾಟಾ ಕೊಟ್ಟಿರುತ್ತೇನೆ. ಆಯ್ಕೆಯನ್ನು ಮಾಜಿ ಕ್ರಿಕೆಟ್‌ ಆಟಗಾರರು ಮಾಡುತ್ತಾರೆ. ತಂಡದ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ ಎಂದು ಕೆಎಸ್‌ಸಿಎ ಹುಬ್ಬಳ್ಳಿ ನಿಮಂತ್ರಕ ನಿಖಿಲ ಭೂಸದ ಹೇಳಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ