ಬಿಡದಿ, ಅತ್ತಿಬೆಲೆಗೆ ಮೆಟ್ರೋ: ಅಧ್ಯಯನ

KannadaprabhaNewsNetwork | Updated : Feb 26 2024, 10:01 AM IST

ಸಾರಾಂಶ

ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಅನುಮೋದನೆಗೆ ಕೇಂದ್ರದ ಅಂತಿಮ ಮುದ್ರೆ ಬೀಳುವ ಮುನ್ನವೇ ಬೆಂಗಳೂರು ಮೆಟ್ರೋ ರೈಲು ನಿಗಮ ಇನ್ನೊಂದು ಹೆಜ್ಜೆ ಇಟ್ಟಿದ್ದು, ಬಿಡದಿವರೆಗೆ 118 ಕಿ.ಮೀ. ಉದ್ದದ ಮೆಟ್ರೋ ವಿಸ್ತರಣೆಯ ಕಾರ್ಯಸಾಧ್ಯತಾ ವರದಿ ಪಡೆಯಲು ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಅನುಮೋದನೆಗೆ ಕೇಂದ್ರದ ಅಂತಿಮ ಮುದ್ರೆ ಬೀಳುವ ಮುನ್ನವೇ ಬೆಂಗಳೂರು ಮೆಟ್ರೋ ರೈಲು ನಿಗಮ ಇನ್ನೊಂದು ಹೆಜ್ಜೆ ಇಟ್ಟಿದ್ದು, ಬಿಡದಿವರೆಗೆ 118 ಕಿ.ಮೀ. ಉದ್ದದ ಮೆಟ್ರೋ ವಿಸ್ತರಣೆಯ ಕಾರ್ಯಸಾಧ್ಯತಾ ವರದಿ ಪಡೆಯಲು ಮುಂದಾಗಿದೆ.

ನಗರದ ಹೊರವಲಯಕ್ಕೆ ಮೆಟ್ರೋ ವಿಸ್ತರಿಸುವ ಯೋಜನೆ ಇದಾಗಿದ್ದು, ಈ ಸಂಬಂಧ ಅಧ್ಯಯನ ವರದಿ ಸಿದ್ಧಪಡಿಸಿಕೊಡಲು ಬಿಎಂಆರ್‌ಸಿಎಲ್‌ ಟೆಂಡರ್‌ ಆಹ್ವಾನಿಸಿದೆ. ಮಾರ್ಚ್‌ 26 ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ. 

ಬಹುತೇಕ ಜುಲೈನಲ್ಲಿ ಈ ಅಧ್ಯಯನದ ಟೆಂಡರ್ ಆಗಲಿದ್ದು, ಗುತ್ತಿಗೆ ಪಡೆಯುವ ಸಂಸ್ಥೆ ಆರು ತಿಂಗಳಲ್ಲಿ ವರದಿಯನ್ನು ನೀಡಬೇಕಿದೆ.

ಮೆಟ್ರೋ ರೈಲು ಮಾರ್ಗ ವಿಸ್ತರಣೆ ಸಂಬಂಧ ಎರಡು ಪ್ಯಾಕೇಜ್‌ ವಿಂಗಡಿಸಲಾಗಿದೆ. ಒಂದನೇ ಹಂತದ ಪ್ಯಾಕೇಜ್‌ನಲ್ಲಿ 50 ಕಿ.ಮೀ. ಉದ್ದದ ಮೂರು ಕಾರಿಡಾರ್‌ ಅಂದರೆ, ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಬಿಡದಿ, ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ರೈಲು ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಎರಡನೇ ಹಂತದ ಪ್ಯಾಕೇಜ್‌ನಲ್ಲಿ 68 ಕಿ.ಮೀ. ಮಾರ್ಗ ಒಳಗೊಂಡಿದ್ದು, ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ಜಿಗಣಿ, ಆನೇಕಲ್‌, ಅತ್ತಿಬೆಲೆ, ಸರ್ಜಾಪುರ, ವರ್ತೂರು ಮತ್ತು ಕಾಡುಗೋಡಿ ವೃಕ್ಷ ಉದ್ಯಾನದವರೆಗೆ ಮೆಟ್ರೋ ಮಾರ್ಗ ನಿರ್ಮಿಸಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗುತ್ತಿದೆ.

ಕಾರ್ಯಸಾಧ್ಯತಾ ವರದಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೋ ಮಾರ್ಗದ ಅಲೈನ್‌ಮೆಂಟ್‌, ಭೂಸ್ವಾಧೀನ, ತೊಡಕುಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ತಿಳಿಸಲಾಗಿದೆ. 

ಇದು ಯೋಜನೆಯ ಮೊದಲ ಹಂತವಾಗಿದ್ದು, ಇದಾದ ಬಳಿಕ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ರೂಪಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Share this article