ಬಿಜೆಪಿ ಅಧಿಕಾರಕ್ಕೆ ಬಂದಾಕ್ಷಣ ಬಿಡದಿ ಟೌನ್ ಶಿಪ್ ಯೋಜನೆ ರದ್ದು

KannadaprabhaNewsNetwork |  
Published : Sep 17, 2025, 01:05 AM IST
3.ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಎತ್ತಿನ ಗಾಡಿ ಮೂಲಕ ಮೆರವಣಿಗೆಯಲ್ಲಿ  ಕರೆತರಲಾಯಿತು. | Kannada Prabha

ಸಾರಾಂಶ

ರಾಮನಗರ: ಜನರಿಗೆ ಕೂಪನ್ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಮನೆ ಹಾಳು ಕಾಂಗ್ರೆಸ್ ಸರ್ಕಾರ ಇನ್ನು ಎರಡು ವರ್ಷಗಳಷ್ಟೇ ಇರಲಿದೆ. ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಡದಿ ಟೌನ್ ಶಿಪ್ ಯೋಜನೆ ಕೈಬಿಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ರಾಮನಗರ: ಜನರಿಗೆ ಕೂಪನ್ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಮನೆ ಹಾಳು ಕಾಂಗ್ರೆಸ್ ಸರ್ಕಾರ ಇನ್ನು ಎರಡು ವರ್ಷಗಳಷ್ಟೇ ಇರಲಿದೆ. ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಡದಿ ಟೌನ್ ಶಿಪ್ ಯೋಜನೆ ಕೈಬಿಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ತಾಲೂಕಿನ ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಕೂಪನ್ ಕೊಟ್ಟ ರೈತರನ್ನು ಕೂಪಕ್ಕೆ ತಳ್ಳುತ್ತಿದೆ. ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನೂರು ಪರ್ಸೆಂಟ್ ಗ್ಯಾರಂಟಿ. ಅಲ್ಲಿವರೆಗೆ ಸರ್ವೆ ಕಾರ್ಯ ಹಾಗೂ ಭೂ ಸ್ವಾಧೀನ ಆಗದಂತೆ ರೈತರು ನೋಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ನಮ್ಮ ತೆರಿಗೆ - ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತಾರೆ. ಇಲ್ಲಿ ನಮ್ಮ ಭೂಮಿ - ನಮ್ಮ ಹಕ್ಕು ಎಂದ ಹೋರಾಟ ಮಾಡುತ್ತಿರುವ ರೈತರಿಗೆ ಅವರ ಭೂಮಿಯನ್ನು ಅವರಿಗೆ ಬಿಟ್ಟು ಕೊಡಿ.ರೈತರ ಎಷ್ಟೋ ಹೋರಾಟಗಳು ಯಶಸ್ಸು ಕಂಡಿವೆ. ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯದಿದ್ದರೆ ದೇವನಹಳ್ಳಿ ಮಾದರಿಯಲ್ಲಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಬುರುಡೆ ಬಿಡುತ್ತಿರುವ ಕೈ ನಾಯಕರು :

ಗ್ರೇಟರ್ ಬೆಂಗಳೂರು ಹೆಸರಲ್ಲಿ ಹಳ್ಳ ತೋಡಿದರು. ರಾಮನ ಹೆಸರು ತೆಗೆದು ಬೆಂಗಳೂರು ಮಾಡಿದರು. ಇದರಿಂದ ಜನರ ಬದುಕೇನು ಬದಲಾವಣೆ ಆಗಿಲ್ಲ. 2006ರ ಬಿಡದಿ ಟೌನ್ ಶಿಪ್ ಯೋಜನೆಗೆ ಅಸ್ತಿತ್ವವೇ ಇಲ್ಲ. ಆ ಹೆಸರಿನಲ್ಲಿ ಭೂಮಿ ಕಬಳಿಸಲು ಮುಂದಾಗಿದ್ದಾರೆ. ಧರ್ಮಸ್ಥಳದಲ್ಲಿ ಬುರುಡೆ ಬಿಟ್ಟಂತೆ ಇಲ್ಲಿಯೂ ಬುರುಡೆ ಬಿಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ 8 ಲಕ್ಷ ಪ್ಲಾಟ್ ಗಳು, ಲಕ್ಷಾಂತರ ನಿವೇಶನಗಳು ಖಾಲಿ ಇವೆ. ಕೆಎಚ್ ಬಿ ಅವರು ನಿರ್ಮಿಸಿರುವ ಶೇ.80ರಷ್ಟು ನಿವೇಶನಗಳು ಖಾಲಿಯಿದ್ದು, ಯಾರು ಸಹ ಮನೆ ಕಟ್ಟಿಲ್ಲ. ಅಲ್ಲಿರುವ ಹೊಸ ಬಡಾವಣೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗ ಫಲವತ್ತಾದ ಭೂಮಿಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಿ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಒಂದೆಡೆ ಸರ್ಕಾರ ವಿಧಾನಸೌಧದ ಮುಂದೆ ನಿಂತು ಹಸಿರು ಉಳಿಸಿ ಪರಿಸರ ಬೆಳೆಸಿ ಎಂದು ಘೋಷಣೆ ಮಾಡುತ್ತದೆ. ಮತ್ತೊಂದೆಡೆ ಟೌನ್ ಶಿಪ್ ಹೆಸರಿನಲ್ಲಿ ಮರ ಗಿಡಗಳನ್ನು ಕಡಿಯಲು ಮುಂದಾಗಿದೆ. ದೇವನಹಳ್ಳಿಯಲ್ಲೂ ಸಹ ನಿಮ್ಮಂತೆ ಹೋರಾಟ ನಡೆಸಿ ಯಶಸ್ಸು ಕಂಡಿದ್ದಾರೆ. ನೀವುಗಳು ನಿಮ್ಮ ಹೋರಾಟ ಮುಂದುವರೆಸಿ, ನಿಮ್ಮ ಬದುಕು, ಜೀವನ ಉಳಿಸಿಕೊಳ್ಳಲು ನಾವು ಬೆಂಬಲ ನೀಡುವ ಜೊತೆಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಭರವಸೆ ನೀಡಿದರು.

ರಾಜ್ಯ ಸರ್ಕಾರ ಬೆಂಗಳೂರು ಸುತ್ತಮುತ್ತ ಆನೇಕಲ್ ಯಶವಂತಪುರ ಭಾಗದಲ್ಲಿಯೂ ಸುಮಾರು 60 ಸಾವಿರ ಎಕರೆ ರೈತರ ಭೂಮಿಯನ್ನು ಸ್ವಾಧೀನಕ್ಕೆ ಮುಂದಾಗಿದೆ. ನಮ್ಮ ಪೂರ್ವಿಕರ ಜಮೀನನ್ನು ಉಳಿಸಿಕೊಳ್ಳುವ ಸವಾಲು ಮುಂದಿದೆ. ಗ್ರಾಮಕ್ಕೆ ಬರುವ ಭೂ ಸ್ವಾಧೀನ ಸಂಬಂಧ ಯಾವುದೇ ಅಧಿಕಾರಿಗಳನ್ನು ಗ್ರಾಮಕ್ಕೆ, ಭೂಮಿಯ ಹತ್ತಿರ ಬಿಟ್ಟುಕೊಡಬೇಡಿ ಎಂದು ಅಶೋಕ್ ಕರೆನೀಡಿದರು.

ನೀರಾವರಿ ಜಮೀನು ವರ್ಗಾಯಿಸಲು ಆಗಲ್ಲ :

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಯಾವುದೇ ನೀರಾವರಿ ಜಮೀನನ್ನು ಕೈಗಾರಿಕೆ, ಮನೆ ನಿರ್ಮಾಣ ಸೇರಿದಂತೆ ಅನ್ಯ ಉದ್ದೇಶಗಳಿಗೆ ವರ್ಗಾಯಿಸಲು ಕಾನೂನಿನಲ್ಲಿ ಸಾಧ್ಯವೇ ಇಲ್ಲ. ಆದರೂ ಸರ್ಕಾರವೇ ತಪ್ಪು ಮಾಡಲು ಹೊರಟಿದೆ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.

ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 2013ರ ಭೂ ಸ್ವಾಧೀನ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಅದನ್ನು ಬಿಟ್ಟು ರೈತರ ಜೊತೆ ಹುಡುಗಾಟ ಆಡುತ್ತಿದೆ.

ನಾವೆಲ್ಲರೂ ಯಾವುದೇ ಸ್ವಾರ್ಥವಿಲ್ಲದೆ ಜನರೊಟ್ಟಿಗಿದ್ದು ನ್ಯಾಯ ಕೊಡಿಸಲು ಬಂದಿದ್ದೇವೆ. ಎಲ್ಲಿವರೆಗೆ ಸರ್ಕಾರ ಮಣಿಯುವುದಿಲ್ಲವೊ ಅಲ್ಲಿವರೆಗೆ ಹೋರಾಟ ಮುಂದುವರೆಯಲಿದೆ ಎಂದರು.

ನಿಮ್ಮ ಕೈಕಾಲು ಹಿಡಿದು ಕಾರಣಕ್ಕೆ ನೀವುಗಳು ಹಾಕಿದ ವೋಟಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಜನರ ಕಷ್ಟಗಳನ್ನು ಕೇಳಬೇಕಾದ ಸರ್ಕಾರವೇ ರೈತರ ಭೂಮಿ ಕಬಳಿಸಿ ಜನ ವಿರೋಧಿಯಾಗಿ ನಡೆದು ಕೊಳ್ಳುತ್ತಿದೆ. ಜನರ ಸೇವೆ ಮಾಡಲು ಅಧಿಕಾರಕ್ಕೆ ಬಂದವರು ಶೇವಿಂಗ್ ಮಾಡುತ್ತಿದ್ದಾರೆ ಎಂದು ಅಶ್ವತ್ಥ ನಾರಾಯಣ ಸರ್ಕಾರದ ಕಾಲೆಳೆದರು.

ಬೈರಮಂಗಲ ಆಸ್ಪತ್ರೆ ಬಳಿಯಿಂದ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಪ್ರಸಾದ್ ಗೌಡ ಅವರನ್ನು ಹಸಿರು ಶಾಲು ಹಾಕಿ, ಅಲಂಕರಿಸಿದ ಎತ್ತಿನ ಬಂಡಿ ಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯದವರೆಗೆ ಮೆರವಣಿಗೆ ನಡೆಸಿ ರೈತರು ಸ್ವಾಗತ ಕೋರಲಾಯಿತು.

ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್ ಗೌಡ, ಕೆಎಸ್ ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರೈತ ಹೋರಾಟಗಾರರಾದ ರಾಮಣ್ಣ, ಪ್ರಕಾಶ್, ನಾಗರಾಜು, ಸೀನಣ್ಣ, ಕೃಷ್ಣಪ್ಪ, ಶೇಷಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಕೋಟ್.................

ರೈತರನ್ನು ಒಕ್ಕಲೆಬ್ಬಿಸುವುದು ಭೂ ತಾಯಿಗೆ ಮಾಡುವ ಅನ್ಯಾಯ. ಕುಮಾರಸ್ವಾಮಿ ಈ ಯೋಜನೆಗೆ ಚಾಲನೆ ಕೊಟ್ಟರು. ಆದರೆ, ಯೋಜನೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಕಾರಣಕ್ಕೆ ಕೈ ಬಿಟ್ಟರು. ಹಾಗಾಗಿ ರಾಜ್ಯ ಸರ್ಕಾರವೂ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈ ಬಿಡಬೇಕು. ಇಲ್ಲದಿದ್ದರೆ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಯಲಿದೆ. ಜನ ಶಕ್ತಿ ಮುಂದೆ ಯಾವ ಶಕ್ತಿ ಯೂ ಇಲ್ಲ.

- ಡಾ.ಸಿ.ಎನ್.ಮಂಜುನಾಥ್ , ಸಂಸದರು.

ಕೋಟ್ .............

ಈ ಭಾಗದ ಭೂಮಿಯನ್ನು ಖರೀದಿ ಮಾಡಿರುವವರು ಅವರ ಹಿಂಬಾಲಕರಾಗಿದ್ದಾರೆ. ಇದರ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಹುನ್ನಾರವಿದೆ. ಭೂ ಸ್ವಾಧೀನದಿಂದ ಎರಡು ಗ್ರಾಮ ಪಂಚಾಯಿತಿಗಳ ಹೈನುಗಾರಿಕೆ, ಪರಿಸರ, ರೈತರ ಬದುಕಿಗೆ ಧಕ್ಕೆ ಆಗುತ್ತದೆ. ಆದ್ದರಿಂದ ವಿರೋಧ ಪಕ್ಷವು ಸರ್ಕಾರವನ್ನು ಎಚ್ಚರಿಸುವ ಮೂಲಕ ರೈತರಿಗೆ ನ್ಯಾಯ ಕೊಡಿಸಬೇಕಿದೆ.

- ಪ್ರಸಾದ್ ಗೌಡ, ಬಿಜೆಪಿ ಮುಖಂಡರು.

16ಕೆಆರ್ ಎಂಎನ್ 3,4,5.ಜೆಪಿಜಿ

3.ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಎತ್ತಿನ ಗಾಡಿ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು.

4.ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಚಳವಳಿಯಲ್ಲಿ ಭಾಗಿಯಾಗಿರುವುದು

5.ರೈತರು ಹಸಿರು ಟವಲ್ ಬೀಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ