ಬೀದರ್: ಯುವ ಶಕ್ತಿಯಿಂದಲೇ ಸಮಾಜದಲ್ಲಿ ದೊಡ್ಡ ಪರಿವರ್ತನೆ ಸಾಧ್ಯ. ಯುವಕರು ದೇಶಪ್ರೇಮ ಮೈಗೊಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಗುರು ಭಾರತ ಮಾಡಲು ಸಂಕಲ್ಪ ಮಾಡಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರೂ ಆದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಕರೆ ನೀಡಿದರು.
ಸ್ವಾಮಿ ವಿವೇಕಾನಂದರ ಚಿಂತನೆಗಳ ಅಳವಡಿಕೆಯಿಂದ ಅದ್ಭುತ ಸಾಧನೆ ಖಚಿತ. ಚಿಂತನೆಗಳು ಯಾವೊಂದು ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತವಲ್ಲ. ಹೀಗಾಗಿ ವಿವೇಕಾನಂದರನ್ನು ಜಾತಿಗೆ ಸೀಮಿತಗೊಳಿಸುವುದು ಬೇಡ, ಸಶಕ್ತ ಭಾರತ, ಸಮೃದ್ಧ ಸಮಾಜ ಕಟ್ಟಲು ಅವರ ಮಾರ್ಗದಲ್ಲಿ ಸಾಗೋಣ ಎಂದರು.
ವಿವೇಕಾನಂದರು ಹಾಗೂ ರಾಮಕೃಷ್ಣರು ಅಧ್ಯಾತ್ಮ ಶಕ್ತಿಯ ಕಣ್ಣುಗಳು:ಸ್ವಾಮಿ ವಿವೇಕಾನಂದರು ಹಾಗೂ ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು ಎರಡು ಮಹಾಶಕ್ತಿಗಳು ಮಾತ್ರವಲ್ಲ, ಭಾರತದ ಅಧ್ಯಾತ್ಮ ಶಕ್ತಿಯ ಎರಡು ಕಣ್ಣುಗಳಾಗಿದ್ದಾರೆ. ಭಾರತವನ್ನು ಅರಿಯಬೇಕಾದರೆ ಮೊದಲು ಸ್ವಾಮಿ ವಿವೇಕಾನಂದರನ್ನು ತಿಳಿದುಕೊ ಎಂದು ರವೀಂದ್ರನಾಥ ಟ್ಯಾಗೋರ್ ಹೇಳಿರುವ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜರು ಮಾತನಾಡಿ, ಸ್ವಾಮಿ ವಿವೇಕಾನಂದರು ನಮ್ಮ ಶಕ್ತಿಯನ್ನು ಅರಿತು ದೊಡ್ಡ ಸಾಧನೆ ಮಾಡಲು ಸರಳ ಉಪಾಯ ಹೇಳಿಕೊಟ್ಟಿದ್ದಾರೆ ಅವುಗಳನ್ನು ನಾವು ಅರಿಯಬೇಕು. ಭಾವನೆಗೆ ತಕ್ಕಂತೆ ಬುದ್ಧಿ, ಮನಸ್ಸು ಹಾಗೂ ದೇಹ ಕೆಲಸ ಮಾಡುತ್ತದೆ ಎಂದರು.
ಕಲಬುರಗಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಅವರು ಮಾತನಾಡಿ, ಯುವಜನಾಂಗ ಬದಲಾವಣೆಗೆ ಒಗ್ಗಿಕೊಂಡು ಸಕಾರಾತ್ಮಕ ಚಿಂತನೆಯಲ್ಲಿ ಹೆಜ್ಜೆ ಹಾಕಬೇಕು ವಿವೇಕಾನಂದರ ಸಾಹಿತ್ಯ ಓದಿದರೆ ಪ್ರೇರಣೆ ಸಿಗಲಿದೆ. ಬೇಕಾದಂಥ ಸಾಧನೆ ಮಾಡಲು ಸರಳ ಮಾರ್ಗ ದೊರಕಲಿದೆ ಎಂದು ಹೇಳಿದರು.
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮ ದ್ವಿದಶಮಾನೋತ್ಸವದ ಸಂಭ್ರಮದಲ್ಲಿದೆ. ಆಶ್ರಮದ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಮಹಾರಾಜ ಅವರು ಗಡಿ ಜಿಲ್ಲೆಗೆ ನೀಡುತ್ತಿರುವ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯವಿದೆ. 6 ವರ್ಷಗಳ ಹಿಂದೆ ಇಲ್ಲಿ ಗೋಶಾಲೆ ಆರಂಭಿಸಿ ಅನೇಕ ಕಷ್ಟ-ನಷ್ಟದ ನಡುವೆಯೂ ಮಾದರಿಯಾಗಿ ನಡೆಸುತ್ತಿರುವುದು ಶ್ಲಾಘನೀಯ. ಎಲ್ಲರೂ ಈ ಪವಿತ್ರ ಕೆಲಸಕ್ಕೆ ಸಹಕಾರ ನೀಡಬೇಕು. ಗೋ ಸೇವೆ ಮಾಡುವ ಮೂಲಕ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದರು.