ಇಂದು ಬೃಹತ್ ಹಿಂದೂ ಸಮಾಜೋತ್ಸವ, ಶೋಭಯಾತ್ರೆ: ಎಸ್.ಪಿ.ಸ್ವಾಮಿ

KannadaprabhaNewsNetwork |  
Published : Jan 30, 2026, 01:45 AM IST
29ಕೆಎಂಎನ್ ಡಿ18 | Kannada Prabha

ಸಾರಾಂಶ

ಜ.30ರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಿಂದ ಪೇಟೆಬೀದಿ ಮೂಲಕ ಶೋಭಾಯಾತ್ರೆಯು ಉಗ್ರ ನರಸಿಂಹಸ್ವಾಮಿ ದೇವಾಲಯದವರೆಗೆ ನಡೆಯಲಿದೆ. ಬಳಿಕ ಹಳೆ ಬಸ್ ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು, ಹಿಂದೂ ಸಮಾಜವನ್ನು ಕಾಪಾಡಿಕೊಳ್ಳಲು ಪಟ್ಟಣದಲ್ಲಿ ಜ.30ರಂದು ಬೃಹತ್ ಹಿಂದೂ ಸಮಾಜೋತ್ಸವ ಮತ್ತು ಶೋಭಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.30ರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಿಂದ ಪೇಟೆಬೀದಿ ಮೂಲಕ ಶೋಭಾಯಾತ್ರೆಯು ಉಗ್ರ ನರಸಿಂಹಸ್ವಾಮಿ ದೇವಾಲಯದವರೆಗೆ ನಡೆಯಲಿದೆ. ಬಳಿಕ ಹಳೆ ಬಸ್ ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ ಎಂದರು.

ತಾಲೂಕಿನ ಎಸ್.ಐ.ಹೊನ್ನಲಗೆರೆ ಶಿವಕ್ಷೇತ್ರ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಶ್ರೀಗಳು ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಂಘಟನೆ ಮುಖಂಡ, ಸಾಮಾಜಿಕ ಕಾರ್ಯಕರ್ತ ಉಲ್ಲಾಸ್, ಹಿಂದೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಷ್ಟ್ರಾದ್ಯಂತ ಹಿಂದೂಗಳ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಹಿಂದೂಗಳಾದ ನಾವು ಸಂಘಟಿತರಾಗಿ ಹೋರಾಟ ರೂಪಿಸದಿದ್ದಲ್ಲಿ ಮುಂದೆ ನಮ್ಮ ಮೇಲೆ ದೊಡ್ಡ ಅನಾಹುತ ಸಂಭವಿಸಬಹುದು. ಹಿಂದೂ ಧರ್ಮ, ಸಂಸ್ಕೃತಿ, ನೆಲ, ಜಲ, ಅತಿಕ್ರಮ ಮಾಡುವವರ ವಿರುದ್ಧ ಯುವಶಕ್ತಿ ಹೆಚ್ಚಿನ ರೀತಿಯಲ್ಲಿ ಕೈಜೋಡಿಸಿ ಹಿಂದೂ ಸಮಾಜವನ್ನು ಉಳಿಸಲು ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಿದರು.

ಶೋಭಾಯಾತ್ರೆಯಲ್ಲಿ ಹಿಂದೂ ಧಾರ್ಮಿಕ ಯುವಕ, ಯುವತಿ ಹಾಗೂ ಹಿಂದೂ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳು, ಮುಖಂಡರು ಭಾಗವಹಿಸಬೇಕು ಎಂದು ಕೋರಿದರು.

ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ಜಿಲ್ಲಾ ಕಾರ್ಯನಿರ್ವಾಹಕ ಅವಿನಾಶ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷಾಚರಣೆ ಅಂಗವಾಗಿ ಮಂಡ್ಯ ಜಿಲ್ಲೆಯ 77 ಸ್ಥಳಗಳಲ್ಲಿ ಹಿಂದೂ ಸಮಾಜೋತ್ಸವ ಮತ್ತು ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮದ್ದೂರು ನಗರ ಸೇರಿದಂತೆ ದೇಶದೆಲ್ಲೆಡೆ ಹಿಂದೂ ಸಮಾಜಕ್ಕೆ ಭಯ- ಭೀತಿ, ಅಗೌರವ ತರುವ ಕೆಲಸ ನಡೆಯುತ್ತಿದೆ. ನಾವೆಲ್ಲ ಹಿಂದೂಗಳು ಒಗ್ಗಟ್ಟು ಪ್ರದರ್ಶಿಸಿ ಹಿಂದೂ ಸಂಸ್ಕೃತಿ, ಸಂಸ್ಕಾರ ಉಳಿಸಬೇಕು. ಹಿಂದೂ ಸಮಾಜೋತ್ಸವ ಜಾತಿ, ಮತ, ರಾಜಕೀಯ ಹೊರತಾಗಿ ನೆರವೇರಿಸಿದ್ದು, ಎಲ್ಲೆಡೆ ಹಿಂದೂ ಧರ್ಮೀಯರು ಒಗ್ಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಹಿಂದೂ ಸಮಾಜೋತ್ಸವ ಹಿಂದೂ ಜ್ಞಾನ ಪರಂಪರೆ, ಹಿಂದೂಗಳ ಬಗ್ಗೆ ಕಾಳಜಿ, ಗೌರವ ಕಾಪಾಡುವ ನಿಟ್ಟಿನಲ್ಲಿ ನಡೆಯುತ್ತಿದೆ. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಯುವಕರು, ಹಿರಿಯರು ಸೇರಿ ಎಲ್ಲಾ ವಯಸ್ಸಿನ ಜನರು, ಜಾತಿ, ಲಿಂಗದ ಭೇದವಿಲ್ಲದೆ ಭಾಗವಹಿಸಬೇಕು ಎಂದು ಕೋರಿದರು.

ಕಾರ್ಯಕ್ರಮ ಆಯೋಜನೆ ಸಮಿತಿ ಅಧ್ಯಕ್ಷ ನೈದಿಲೆ ಚಂದ್ರು ಮಾತನಾಡಿ, ಈ ಹಿಂದೆ ಮದ್ದೂರು ಪಟ್ಟಣದಲ್ಲಿ ಮತೀಯ ಗಲಭೆ ಸೃಷ್ಟಿಗೆ ಮುಂದಾದ ಒಂದು ಕೋಮಿನ ಯುವಕರಿಗೆ ಈಗಾಗಲೇ ತಕ್ಕ ಉತ್ತರ ಸಿಕ್ಕಿದೆ. ಮುಂಬರುವ ದಿನಗಳಲ್ಲೂ ಧರ್ಮ, ಸಂಸ್ಕೃತಿ, ಅತಿಕ್ರಮಣದಂತಹ ಕಾರ್ಯಕ್ಕೆ ಮುಂದಾಗುವವರ ವಿರುದ್ಧ ಪ್ರಬಲ ಹೋರಾಟ ನಡೆಯಬೇಕಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಸಮಾಜೋತ್ಸವದ ಮುಖಂಡರಾದ ಶಾಮಿಯಾನ ಗುರುಸ್ವಾಮಿ, ಎಂ.ಎಸ್.ವೀರಭದ್ರಸ್ವಾಮಿ, ನಗರಘಟಕದ ಅಧ್ಯಕ್ಷ ಮಧುಕುಮಾರ, ಎಂ.ಎಸ್. ಜಗನ್ನಾಥ, ಚಿಕ್ಕಅಂಕನಹಳ್ಳಿ ಮನುಕುಮಾರ್, ಅರವಿಂದ, ಗುರುಮಲ್ಲೇಶ್, ಸಂತೋಷ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!