30ರಂದು ಬೃಹತ್ ಉದ್ಯೋಗ ಮೇಳ: ಸಂಕನೂರ

KannadaprabhaNewsNetwork | Published : Sep 27, 2024 1:17 AM

ಸಾರಾಂಶ

ಉದ್ಯೋಗ ಮೇಳದಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಬಿಎ, ಬಿಬಿಎ, ಬಿಸಿಎ, ಬಿ.ಎಸ್.ಡಬ್ಲ್ಯು, ನರ್ಸಿಂಗ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಎಂಜನಿಯರಿಂಗ್, ಐಟಿಐ, ಪಿಯು, ಯಾವುದೇ ಪದವಿ ಅಥವಾ ಪಿಜಿ ಅಭ್ಯರ್ಥಿಗಳು ಭಾಗವಹಿಸಬಹುದು

ಗದಗ: ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ ಹುಬ್ಬಳ್ಳಿ, ಎಸ್.ಆರ್.ಬೊಮ್ಮಾಯಿ ಟ್ರಸ್ಟ್ ಹುಬ್ಬಳ್ಳಿ ಹಾಗೂ ಬಾಷ್ ಕಂಪನಿ ಹಾಗೂ ಸ್ಥಳೀಯ ಇನ್ಸ್‌ಪೈರಾ ಟೆಕ್ನಾಲಜೀಸ್ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳವನ್ನು ಸೆ. 30 ರಂದು ನಗರದ ಕೆಎಲ್ಇ ಸೊಸೈಟಿಯ ಜ.ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ ಬಾಷ್, ಟೊಯೋಟಾ, ಹೊಂಡಾ, ಎಕ್ಸೆಂಚರ್, ಮುತ್ತೂಟ್ ಪೈನಾನ್ಸ್, ಎಕ್ಸಿಸ್ ಬ್ಯಾಂಕ್, ಟಿವಿಎಸ್ ಕ್ರೆಡಿಟ್ (ಫೈನಾನ್ಸ್) ಇಂಕ್ ಇಂಪಾಕ್ಟ್, ಪೊರ್ಟಿಯಾ ಮೆಡಿಕಾ, ಮೆಡ್‌ಪ್ಲಸ್, ಅಂತಹ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಬಿಎ, ಬಿಬಿಎ, ಬಿಸಿಎ, ಬಿ.ಎಸ್.ಡಬ್ಲ್ಯು, ನರ್ಸಿಂಗ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಎಂಜನಿಯರಿಂಗ್, ಐಟಿಐ, ಪಿಯು, ಯಾವುದೇ ಪದವಿ ಅಥವಾ ಪಿಜಿ ಅಭ್ಯರ್ಥಿಗಳು ಭಾಗವಹಿಸಬಹುದು.

ಅಭ್ಯರ್ಥಿಗಳ ನೋಂದಣಿ ಕಾರ್ಯ ಬೆಳಗ್ಗೆ 9ರಿಂದ ಮದ್ಯಾಹ್ನ 2ರ ವರೆಗೆ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಸಂದರ್ಶನವು ಸಂಜೆ 5 ರ ವರೆಗೆ ನಡೆಯಲಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಉದ್ಯೋಗಾಸಕ್ತರು ತಮ್ಮ ಹೆಸರು ನೋಂದಾಯಿಸುತ್ತಿದ್ದಾರೆ. ಇಲ್ಲಿಯವರೆಗೆ 630ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಉದ್ಯೋಗ ಮೇಳದಲ್ಲಿ ಯಾವುದೇ ಜಿಲ್ಲೆಯ ವಿದ್ಯಾರ್ಥಿಗಳು ಕೂಡಾ ಭಾಗವಹಿಸಬಹುದು.

ಉದ್ಯೋಗ ಮೇಳದಲ್ಲಿ ನೋಂದಣಿಗಾಗಿ ಒಟ್ಟು 8 ಕೌಂಟರ್‌ಗಳು ಇರುತ್ತವೆ, ಅದರಲ್ಲಿ 2 ಕೌಂಟರ್‌ ಪದವೀಧರರು ಹಾಗೂ ಪಿಜಿ ಅಭ್ಯರ್ಥಿಗಳಿಗಾಗಿ, 3 ಕೌಂಟರ್ ಪಿಯುಸಿ, ಐಟಿಐ ಅಭ್ಯರ್ಥಿಗಳಿಗಾಗಿ, 2 ಕೌಂಟರ್ ಡಿಪ್ಲೊಮಾ ಹಾಗೂ ಬಿಇ, ಬಿಟೆಕ್, ಅಭ್ಯರ್ಥಿಗಳಿಗಾಗಿ, 1 ಕೌಂಟರ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಅಭ್ಯರ್ಥಿಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಉದ್ಯೋಗ ಮೇಳವನ್ನು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಮುಖ್ಯ ಅಥಿತಿಗಳಾಗಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ, ಬಾಷ್ ಇಂಡಿಯಾ ಫೌಂಡೇಶನ್‌ನ ಪ್ಲೇಸಮೆಂಟ್ ಅಧಿಕಾರಿ ಕಲೀಮ್.ಎಸ್., ಸ್ಟೇಟ್ ಲೀಡ್ ಸುಧೀರ್ ಪಿಡ್ಡಿ ಬಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ವಹಿಸುವರು ಎಂದು ತಿಳಿಸಿದರು.

Share this article