ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಗರದಲ್ಲಿ ಇಂದು, ನಾಳೆ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಸುಮಾರು 150ಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ಮಟ್ಟದ ಕಂಪನಿಗಳು ಭಾಗಿಯಾಗಲಿವೆ.‘ಮಂಡ್ಯ ಟೂ ಇಂಡಿಯಾ’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಉದ್ಯೋಗ ಮೇಳ ಜಿಲ್ಲೆಯ ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು ಆಗಲಿದೆ. ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಉದ್ಯೋಗ ಮೇಳವನ್ನು ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅ.18 ಮತ್ತು 19ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಉದ್ಯೋಗ ನಡೆಯಲಿದೆ. ಆಸಕ್ತ ಜಿಲ್ಲೆಯ ಯುವಜನರು, ಹೊರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ (BHEL), ಜಿಂದಾಲ್ ಸ್ಟೀಲ್ ಸೇರಿದಂತೆ 150ಕ್ಕೂ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ನೇರ ನೇಮಕಾತಿ ಮಾಡಿಕೊಳ್ಳುತ್ತಿವೆ. ದೇಶಾದ್ಯಂತ ಉದ್ಯೋಗ ಅವಕಾಶಗಳು ಲಭ್ಯ ಇದ್ದು, ಈ ಅವಕಾಶವನ್ನು ಯುವ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಕೋರಿದ್ದಾರೆ.
ಜಿಲ್ಲೆಯಲ್ಲಿ ಪ್ರತಿಭಾನ್ವಿತ ಯುವ ಜನರಿಗೆ ಕೊರತೆ ಇಲ್ಲ. ಉತ್ತಮ ವಿದ್ಯಾ ಸಂಸ್ಥೆಗಳು ಇದ್ದು, ಪ್ರತಿವರ್ಷ ಸಾಕಷ್ಟು ಯುವಜನರು ಉತ್ತೀರ್ಣರಾಗಿ ಕಾಲೇಜುಗಳಿಂದ ಹೊರಗೆ ಬರುತ್ತಿದ್ದಾರೆ. ಇವರಿಗೆ ಆದಷ್ಟು ಉದ್ಯೋಗಾವಕಾಶ ಕಲ್ಪಿಸಬೇಕು ಎನ್ನುವುದು ನನ್ನ ಸಂಕಲ್ಪವಾಗಿದೆ. ನನ್ನ ಸಚಿವಾಲಯದ ಉನ್ನತ ಅಧಿಕಾರಿಗಳು, ಜಿಲ್ಲೆಯ ಉನ್ನತ ಹಾಗೂ ಎಲ್ಲಾ ಶ್ರೇಣಿಯ ಅಧಿಕಾರಿಗಳು ಉದ್ಯೋಗ ಮೇಳದ ಯಶಸ್ಸಿಗೆ ಕೆಲಸ ಮಾಡುತ್ತಿದ್ದಾರೆ.ಉದ್ಯೋಗ ಅರಸಿ ಬರುವ ಅಭ್ಯರ್ಥಿಗಳಿಗೆ ನಮ್ಮ ಸ್ವಯಂ ಸೇವಕರು, ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಂಪನಿಗಳ ಅಧಿಕಾರಿಗಳು ಅಭ್ಯರ್ಥಿಗಳ ವಿವರಗಳನ್ನು ಗಮನಿಸಿದ ನಂತರ ಅವರಿಗೆ ಸೂಕ್ತ, ಅರ್ಹವಾದ ಹುದ್ದೆ ನೀಡುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಹಾಗೂ ನಿರುದ್ಯೋಗಿಗಳ ಸಂದರ್ಶನ ನಡೆಸಲು ನೂರಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆದು ನಿರುದ್ಯೋಗಿಗಳ ಸಂದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮೇಳಕ್ಕೆ ಈಗಾಗಲೇ ಎರಡು ಸಾವಿರಕ್ಕೂ ಅಧಿಕ ಮಂದಿ ನೋಂದಾಯಿತರಾಗಿದ್ದಾರೆ. 3 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿತರಾಗುವ ನಿರೀಕ್ಷೆ ಇದೆ.ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಪದವೀದರರು, ಇಂಜಿನಿಯರಿಂಗ್ ವಿದ್ಯಾರ್ಹತೆಗನುಗುಣವಾಗಿ ಹಲವು ಉದ್ಯೋಗಾವಕಾಶಗಳಿವೆ. ಮೇಳದಲ್ಲಿ ಭಾಗವಹಿಸುವ ಎಲ್ಲರಿಗೂ ಊಟ, ನೀರು ಸೇರಿದಂತೆ ಅಗತ್ಯ ಎಲ್ಲಾ ವ್ಯವಸ್ಥೆ ಕಲ್ಪಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.‘ಪ್ರತಿದಿನವೂ ನನ್ನ ಮನೆಗೆ ಬರುವ ಅಸಂಖ್ಯಾತ ನಿರುದ್ಯೋಗಿ ಯುವ ಯುವಕರು ಉದ್ಯೋಗ ಕೊಡಿಸುವಂತೆ ಕೋರುತ್ತಾರೆ. ಮಕ್ಕಳ ಭವಿಷ್ಯಕ್ಕಾಗಿ ತಂದೆ- ತಾಯಿ ಒಳ್ಳೆಯ ಕನಸು ಕಟ್ಟಿಕೊಂಡಿರುತ್ತಾರೆ. ಇವರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಆದರೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಈಗ ಉದ್ಯೋಗ ಮೇಳದ ಮೂಲಕ ಸಾವಿರಾರು ಸಂಖ್ಯೆಯಷ್ಟು ಯುವ ಜನರಿಗೆ ಕೆಲಸ ಸಿಗಲಿದೆ.’
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು