ಎಆರ್‌ಎಐ ಕೇಂದ್ರ ಕೈತಪ್ಪಿದರೆ ಜಿಲ್ಲೆಗೆ ದೊಡ್ಡ ನಷ್ಟ: ಕೇಂದ್ರ ಸಚಿವ ಎಚ್‌ಡಿಕೆ

KannadaprabhaNewsNetwork |  
Published : Apr 07, 2026, 01:30 AM IST
೬ಕೆಎಂಎನ್‌ಡಿ-೪ಮಂಡ್ಯದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಗೆ ಎಆರ್‌ಎಐ ಪರೀಕ್ಷಾ ಕೇಂದ್ರ ಬರುತ್ತಿರುವುದೇ ಹೆಮ್ಮೆಯ ಸಂಗತಿ. ಈ ಪರೀಕ್ಷಾ ಕೇಂದ್ರವನ್ನು ತೆಗೆದುಕೊಂಡು ಹೋಗಲು ಅನೇಕ ರಾಜ್ಯಗಳು ತುದಿಗಾಲ ಮೇಲೆ ನಿಂತಿವೆ. ಇಂತಹ ಒಳ್ಳೆಯ ಅವಕಾಶವನ್ನು ಕೈಚೆಲ್ಲಿದರೆ ಜಿಲ್ಲೆಗೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಗೆ ಎಆರ್‌ಎಐ ಪರೀಕ್ಷಾ ಕೇಂದ್ರ ಬರುತ್ತಿರುವುದೇ ಹೆಮ್ಮೆಯ ಸಂಗತಿ. ಈ ಪರೀಕ್ಷಾ ಕೇಂದ್ರವನ್ನು ತೆಗೆದುಕೊಂಡು ಹೋಗಲು ಅನೇಕ ರಾಜ್ಯಗಳು ತುದಿಗಾಲ ಮೇಲೆ ನಿಂತಿವೆ. ಇಂತಹ ಒಳ್ಳೆಯ ಅವಕಾಶವನ್ನು ಕೈಚೆಲ್ಲಿದರೆ ಜಿಲ್ಲೆಗೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.

ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ದಯವಿಟ್ಟು ಯಾರೂ ರಾಜಕೀಯ ಮಾಡುವುದು ಬೇಡ. ಎಲ್ಲರೂ ಒಟ್ಟಾಗಿ ಈ ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಶ್ರಮಿಸೋಣ. ಯೋಜನೆಗೆ ರಾಜ್ಯ ಸರ್ಕಾರದಿಂದ ನಿಗದಿಯಾಗಿರುವ ಜಾಗದ ಬಗ್ಗೆ ಮಾತುಕತೆ ನಡೆಯುತ್ತಿದೆ. ಜಾಗದ ಸಾಧಕ-ಬಾಧಕದ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ. ಸಮಯ ವ್ಯರ್ಥ ಮಾಡುವುದು ಬೇಡ, ಮೇ ತಿಂಗಳಲ್ಲಿ ಶಂಕುಸ್ಥಾಪನೆ ಮಾಡೋಣ ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಎಆರ್‌ಎಐ ಪರೀಕ್ಷಾ ಕೇಂದ್ರ ಮಂಡ್ಯಕ್ಕೆ ಬರುವುದರಿಂದ ಅಭಿವೃದ್ಧಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಮುಂದಿನ ತಲೆಮಾರಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತದೆ. ಒಂದು ವಾರದಲ್ಲಿ ನಾನೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದು ಸಭೆ ಕರೆಯುವಂತೆ ಕೋರುತ್ತೇನೆ. ರಾಜ್ಯ ಸರ್ಕಾರ ಸಹಕಾರವಿಲ್ಲದೆ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ರಾಜ್ಯವು ಇಂತಹ ಯೋಜನೆಗಳಿಗೆ ಅತಿ ಹೆಚ್ಚಿನ ಮಹತ್ವ ಕೊಡಬೇಕು ಎಂದರು.

ವಾರದೊಳಗೆ ಕೇಂದ್ರ ಸಂಪುಟಕ್ಕೆ:

ಇನ್ನೊಂದು ವಾರದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರದ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸಂಪುಟದ ಮುಂದೆ ಮಂಡಿಸಲಾಗುವುದು. ಕಳೆದ ಬಜೆಟ್‌ನಲ್ಲಿ ಈ ಯೋಜನೆಗೆ ೫೦೦ ಕೋಟಿ ರು. ಮೀಸಲಿಡಲಾಗಿತ್ತು, ಈಗ ೭೫೦ ಕೋಟಿ ರು. ವೆಚ್ಚ ಮಾಡಲು ನಾವು ಸಿದ್ಧರಿದ್ದೇವೆ. ನಾನು ಮಂತ್ರಿಯಾಗಿರುವ ಬೃಹತ್ ಕೈಗಾರಿಕೆ ಇಲಾಖೆಯಿಂದಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಒಟ್ಟು ೧೦೦೦ ಕೋಟಿ ರು. ಹೂಡಿಕೆಯಾಗಲಿದ್ದು, ಕಡಿಮೆ ಎಂದರೂ ಜಿಲ್ಲೆಯಲ್ಲಿ ೨೫,೦೦೦ ಯುವಜನರಿಗೆ ಉದ್ಯೋಗ ದೊರಕಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಮಕ್ಕಳಿಗೆ ಕೆಲಸ ದೊರೆಯುತ್ತದೆ ಎಂದು ನುಡಿದರು.

ಜಿಲ್ಲೆಯ ಆರ್ಥಿಕತೆಗೆ ಹೊಸ ಶಕ್ತಿ:

ಆಟೋ ಮೊಬೈಲ್ ಕ್ಷೇತ್ರದಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಇಕೋ ಸಿಸ್ಟಮ್ ಸೃಷ್ಟಿಯಾಗಿ ಜಿಲ್ಲೆಯ ಆರ್ಥಿಕತೆಗೆ ಶಕ್ತಿ ಸಿಗಲಿದೆ. ಈಗ ೧೦೫ ಎಕರೆ ಕೊಡುತ್ತಿದ್ದೀರಿ, ಸಾಧ್ಯವಾದರೆ ಮತ್ತಷ್ಟು ಜಾಗ ನೀಡಿ. ಕನಿಷ್ಠ ಪಕ್ಷ ಸಾವಿರ ಕೋಟಿ ರು. ಹಣವನ್ನು ನನ್ನ ಸಚಿವಾಲಯದಿಂದಲೇ ಹೂಡಿಕೆ ಮಾಡುತ್ತೇವೆ. ಪಕ್ಷ ರಾಜಕಾರಣವನ್ನು ಬದಿಗಿಟ್ಟು ಜಿಲ್ಲೆಯ ಒಳಿತಿಗಾಗಿ ಮತ್ತು ಜಿಲ್ಲೆಯ ಹಿತಕ್ಕಾಗಿ ಈ ಯೋಜನೆಯನ್ನು ಅನುಷ್ಠಾನ ಮಾಡೋಣ ಎಂದು ಪಕ್ಷಾತೀತವಾಗಿ ಎಲ್ಲರಲ್ಲೂ ಮನವಿ ಮಾಡಿದರು.

ಈಗಾಗಲೇ ನಮ್ಮ ಇಲಾಖೆಯ ತಂಡ ಬಂದು ಪರಿಶೀಲನೆ ನಡೆಸಿದೆ. ಜಿಲ್ಲಾಧಿಕಾರಿಗಳ ಜೊತೆಯೂ ಸಭೆ ನಡೆಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತಾಂತ್ರಿಕ ವರದಿಯನ್ನು ಕೊಡಬೇಕಿದ್ದು, ಆ ವರದಿ ಕೊಡಲು ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಆ ವರದಿ ನಮ್ಮ ಕೈ ಸೇರಿದ ತಕ್ಷಣ ನಾವು ಮುಂದಿನ ಕೆಲಸಗಳನ್ನು ಮಾಡುತ್ತೇವೆ. ನನ್ನ ಇಲಾಖೆ ಅಧಿಕಾರಿಗಳು ಕೂಡ ಈ ಯೋಜನೆಯನ್ನು ಮಂಡ್ಯದಲ್ಲಿ ಕಾರ್ಯಗತ ಮಾಡಲು ಉತ್ಸುಕತೆ ಹೊಂದಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಶಾಸಕರಾದ ಪಿ.ರವಿಕುಮಾರ್‌, ಎಚ್.ಟಿ.ಮಂಜು, ಕೆ.ವಿವೇಕಾನಂದ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇತರರಿದ್ದರು.

ಯೋಜನೆಗೆ ವಿಘ್ನ ಎದುರಾಗಲು ನಾನು ಬಿಡೋಲ್ಲ

ಯಾವುದೇ ಕಾರಣಕ್ಕೂ ಈ ಯೋಜನೆಗೆ ವಿಘ್ನ ಎದುರಾಗಲು ನಾನು ಬಿಡುವುದಿಲ್ಲ. ಶಾಸಕ ಪಿ.ರವಿಕುಮಾರ್ ಅವರು ಈ ಯೋಜನೆ ಬಗ್ಗೆ ಬಹಳ ಚರ್ಚೆ ಮಾಡಿದ್ದಾರೆ. ಭೂಮಿ ನಮಗೆ ಹಂಚಿಕೆ ಮಾಡಿ ಎಂದು ರೈತರು ಕೇಳುತ್ತಿದ್ದಾರೆ, ನನ್ನಲಿಗೂ ಬಂದು ರೈತರು ಮನವಿ ಮಾಡಿದ್ದಾರೆ. ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿರುವುದು ರಾಜ್ಯ ಸರ್ಕಾರ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿ ಈ ಪರೀಕ್ಷಾ ಕೇಂದ್ರ ಬರುತ್ತದೆ ಎಂದು ಕಾರಣಕ್ಕೆ ರಾಜ್ಯದ ಆಟೋ ಮೊಬೈಲ್ ಉದ್ಯಮದಾರರು ಬಹಳ ಖುಷಿಯಾಗಿದ್ದಾರೆ. ಇಂತಹ ಉತ್ತಮ ಯೋಜನೆ ಬರುತ್ತಿರುವಾಗ ಇದರ ನಡುವೆ ರಾಜಕೀಯ ಏಕೆ ಬರಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಯಾಕೆ ಮಾಡಬೇಕು ಎಂಬುದೇ ನನಗೆ ಅರ್ಥವಾಗದ ವಿಷಯ ಎಂದರು.

ನನ್ನ ಮೇಲೆ ವೈಯಕ್ತಿಕ ಹಗೆತನ ಬೇಡ

ರಾಜ್ಯ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕೆಲಸವನ್ನು ನಾನು ಮಾಡಲು ಸಿದ್ಧನಿದ್ದೇನೆ. ರಾಜಕೀಯವನ್ನು ಬದಿಗಿರಿಸಿ ನನ್ನನ್ನು ಬಳಕೆ ಮಾಡಿಕೊಳ್ಳಿ. ಜಿಲ್ಲೆಗೆ ಒಳ್ಳೆಯ ಕೆಲಸ ಮಾಡುವ ವಿಚಾರದಲ್ಲಿ ನಮ್ಮ ಮಧ್ಯೆ ಭಿನ್ನಮತ, ಭಿನ್ನಾಭಿಪ್ರಾಯ ಯಾಕೆ ಬೇಕು?.

ನನ್ನ ಮೇಲೆ ವೈಯಕ್ತಿಕ ಹಗೆತನದ ಅವಶ್ಯಕತೆ ಇಲ್ಲ, ರಾಜಕೀಯ ಏನಿದ್ದರೂ ಚುನಾವಣೆಗೆ ಮಾತ್ರ ಸೀಮಿತಗೊಳಿಸೋಣ. ನನ್ನಲ್ಲಿ ಯಾವ ಕಲ್ಮಶವೂ ಇಲ್ಲ. ಅಭಿವೃದ್ಧಿ ಕೆಲಸಕ್ಕೆ ನಾನು ಬದ್ಧನಾಗಿದ್ದೇನೆ. ತಮಿಳುನಾಡಿನಲ್ಲಿ ನಮ್ಮ ಇಲಾಖೆಯ ಇನ್ನೊಂದು ಕಾರ್ಖಾನೆ ಇದೆ. ಅದರ ವಿಸ್ತರಣ ಯೋಜನೆಯನ್ನು ಮಂಡ್ಯಕ್ಕೆ ತರುವ ಉದ್ದೇಶ ಹೊಂದಿದ್ದೇನೆ. ಅದಕ್ಕೆ ಸಹಕಾರ ನೀಡಿ. ಶಾಸಕ ಪಿ.ರವಿಕುಮಾರ್ ಉತ್ಸಾಹಿ ಯುವಕರಿದ್ದಾರೆ. ನನ್ನ ಹೇಳಿಕೆಗೆ ಪ್ರತಿ ಹೇಳಿಕೆ ನೀಡುವುದು ಬೇಡ. ನಿಮ್ಮ ಕ್ಷೇತ್ರದಲ್ಲಿ ಎಆರ್‌ಎಐ ಕೇಂದ್ರ ಸ್ಥಾಪನೆಯಾಗುವುದರಿಂದ ನನ್ನ ಮತ್ತು ರಾಜ್ಯ ಸರ್ಕಾರ ಜೊತೆ ಕೊಂಡಿಯಾಗಿ ಕೆಲಸ ಮಾಡಿ. ಆದಷ್ಟು ಬೇಗ ಈ ಯೋಜನೆಗೆ ಭೂಮಿ ಪೂಜೆ ಮಾಡೋಣ ಎಂದು ಕುಮಾರಸ್ವಾಮಿ ಕೋರಿದರು.

ಎಆರ್‌ಎಐ ಕೇಂದ್ರ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪನೆಯಾಗುತ್ತಿದೆ. ಶಾಸಕರಾಗಿ ನೀವು ಹೆಚ್ಚಿನ ಒತ್ತಾಸೆಯಾಗಿ ನಿಲ್ಲಬೇಕು. ಕೇಂದ್ರ ಸಚಿವರು ಮತ್ತು ರಾಜ್ಯ ಸರ್ಕಾರದ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಿ. ಯೋಜನೆ ಅನುಷ್ಠಾನಕ್ಕೆ ನೆರವಾಗಿ ನಿಲ್ಲಿ. ನಮ್ಮಿಂದಾಗುವ ಸಹಕಾರವೆಲ್ಲವನ್ನೂ ನಾವು ನೀಡಲು ಸಿದ್ಧರಿದ್ದೇವೆ.

- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು

ನನ್ನ ಕ್ಷೇತ್ರದಲ್ಲಿ ಕೈಗಾರಿಕೆ ತರುತ್ತಿರುವುದಕ್ಕೆ ಹೃದಯಪೂರ್ವಕ ಸ್ವಾಗತ. ಬಸರಾಳು ಬಳಿ 100 ಎಕರೆ ಜಾಗವಿದೆ ಎಂದು ಮೊದಲು ನಾನೇ ಘೋಷಣೆ ಮಾಡಿದ್ದೆ. ರಾಜಕೀಯ ಆಕಾಂಕ್ಷಿತರೊಬ್ಬರು ಆ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ರೈತರನ್ನು ದಾರಿ ತಪ್ಪಿಸಿದ್ದಾರೆ. ರೈತರು ನನಗೂ ದೂರು ನೀಡಿದ್ದು ಅವರನ್ನು ಕರೆಸಿ ಎರಡು ಬಾರಿ ಮಾತನಾಡಿ ಮನವೊಲಿಸಿದ್ದೇನೆ.10 ಗುಂಟೆ ಜಮೀನು ಇರುವವರು ಎರಡು-ಮೂರು ಎಕರೆ ಜಮೀನಿನಲ್ಲಿ ಅನುಭವದಲ್ಲಿದ್ದಾರೆ. ಅವರ ಜಮೀನಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿಯೂ ಹೇಳಿದ್ದೇನೆ. ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ. ನಿಮ್ಮ ನೇತೃತ್ವದಲ್ಲಿ ಒಂದು ಸಭೆಯನ್ನು ಆಯೋಜನೆ ಮಾಡಿ. ನಾವೆಲ್ಲರೂ ಭಾಗವಹಿಸುತ್ತೇವೆ.

- ಪಿ.ರವಿಕುಮಾರ್‌, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರಮಂಡ್ಯ ಜಿಲ್ಲೆಯಲ್ಲಿ ಮಿತಿ ಮೀರಿದ ಮಟ್ಕಾ ದಂಧೆ

ಮಂಡ್ಯ ಜಿಲ್ಲೆಯಲ್ಲಿ ಮಟ್ಕಾ ದಂಧೆ ಮಿತಿಮೀರಿದೆ. ಪಬ್‌ಗಳು, ಬಾರ್‌ಗಳು, ಮನೆಗಳಲ್ಲೂ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ನನಗೆ ನಿರಂತರವಾಗಿ ದೂರುಗಳು ಬರುತ್ತಿವೆ. ನೀವು ಯಾರ ಮುಲಾಜಿಗೆ ಒಳಗಾಗದೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೇಂದ್ರ ಸಚಿವ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದರು.

ಯಾವುದಾದರೂ ಕಾಣದ ಕೈ ದಂಧೆ ಹಿಂದೆ ಇದ್ದರೆ ಅದನ್ನು ಮಟ್ಟ ಹಾಕಿ. ಮಟ್ಕಾ, ಗ್ಯಾಂಬ್ಲಿಂಗ್ ದಂಧೆ ಬಗ್ಗೆ ನನಗೆ ದಿನವೂ ದೂರುಗಳು ಬರುತ್ತಿವೆ ಎಂದು ಹೇಳಿದಾಗ, ಈ ಬಗ್ಗೆ ಈಗಾಗಲೇ ಹಲವಾರು ಕಡೆ ದಾಳಿ ನಡೆಸಲಾಗಿದೆ. ಅನೇಕರ ವಿರುದ್ಧ ದೂರುಗಳನ್ನು ದಾಖಲಿಸಲಾಗಿದೆ ಎಂದು ಎಸ್‌ಪಿ ಡಾ.ವಿ.ಜೆ.ಶೋಭಾರಾಣಿ ವಿವರಣೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿ: 2 ರಾಗಿ ಮೆದೆ ಭಸ್ಮ
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯ ಗಡಿ ಪರಿಷ್ಕರಿಸಿ