ಉಷಾ ಶಿವಕುಮಾರ್ ಪುಷ್ಪಾರ್ಚನೆಯಿಂದ ಸ್ತ್ರೀ ಸಮಾನತೆಯ ದೊಡ್ಡ ಸಂದೇಶ: ಕೆ.ವಿ.ಮಲ್ಲೇಶ್‌

KannadaprabhaNewsNetwork |  
Published : Oct 25, 2026, 01:15 AM IST
41 | Kannada Prabha

ಸಾರಾಂಶ

ಉಷಾ ಅವರು ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು. ಮುಖ್ಯಮಂತ್ರಿಯ ಮಡದಿಯಾಗಿ ಅವರು ಪುಷ್ಪಾರ್ಚನೆಯಲ್ಲಿ ಭಾಗವಹಿಸಿರುವುದಕ್ಕೆ ಕ್ಷೇತ್ರದ ಶಾಸಕರಾಗಿ ಹೆಮ್ಮೆಪಡಬೇಕು. ಅದು ಬಿಟ್ಟು ಮೊಸರಲ್ಲಿ ಕಲ್ಲುಹುಡುಕುವ ಕೆಲಸ ಮಾಡಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವದಲ್ಲಿ ಜಂಬೂಸವಾರಿಯಂದು ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡಿರುವುದು ಅಪರಾಧವಲ್ಲ, ಅದು ಸ್ತ್ರೀ ಸಮಾನತೆಯ ದೊಡ್ಡ ಸಂದೇಶ ಎಂದು ನಗರಪಾಲಿಕೆ ಮಾಜಿ ಸದಸ್ಯ, ನಗರ ಕಾಂಗ್ರೆಸ್‌ ಉಪಾಧ್ಯಕ್ಷ ಕೆ.ವಿ. ಮಲ್ಲೇಶ್‌ ಸಮರ್ಥಿಸಿಕೊಂಡಿದ್ದಾರೆ.

ಉಷಾ ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡಿರುವುದನ್ನೇ ದೊಡ್ಡ ಅಪರಾಧವೆಂಬಂತೆ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಆರೋಪಿಸುರುತ್ತಿರುವುದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಸ್ತ್ರೀಕುಲಕ್ಕೆ ಮಾಡುತ್ತಿರುವ ಅಪಮಾನ ಎಂದು ಅವರು ತಿರುಗೇಟು ನೀಡಿದ್ದಾರೆ.

ಉಷಾ ಅವರು ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು. ಮುಖ್ಯಮಂತ್ರಿಯ ಮಡದಿಯಾಗಿ ಅವರು ಪುಷ್ಪಾರ್ಚನೆಯಲ್ಲಿ ಭಾಗವಹಿಸಿರುವುದಕ್ಕೆ ಕ್ಷೇತ್ರದ ಶಾಸಕರಾಗಿ ಹೆಮ್ಮೆಪಡಬೇಕು. ಅದು ಬಿಟ್ಟು ಮೊಸರಲ್ಲಿ ಕಲ್ಲುಹುಡುಕುವ ಕೆಲಸ ಮಾಡಬಾರದು ಎಂದಿದ್ದಾರೆ.

ಇಷ್ಟಕ್ಕೂ ಮುಖ್ಯಮಂತ್ರಿ ಪತ್ನಿ ವೇದಿಕೆ ಏರಿ ಪುಷ್ಪಾರ್ಚನೆ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಪತ್ನಿ ಅನಿತಾ ಅವರು ಪುಷ್ಪಾರ್ಚನೆ ಮಾಡಿದ್ದರು. ಈ ವೇಳೆ ಸ್ವತಃ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಜತೆಗಿದ್ದ ಫೋಟೋ ವೈರಲ್ ಆಗಿದೆ. ಮಾತ್ರವಲ್ಲದೇ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಪತ್ನಿ ಪ್ರೇಮಾ ಕೃಷ್ಣ ಅವರೂ ಸಹ ವೇದಿಕೆ ಏರಿ ಪುಷ್ಪಾರ್ಚನೆ ಮಾಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಇದರ ಅರಿವಿದ್ದೂ ಶಾಸಕ ಶ್ರೀವತ್ಸ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಇಡೀ ಹೆಣ್ಣಿನ ಕುಲಕ್ಕೆ ಅವರು ಮಾಡಿದ ಅಪಮಾನ. ಸ್ತ್ರೀ ಸಮಾನತೆಯ ವಿರೋಧಿ ನಡೆ ಎಂದು ಅವರು ಟೀಕಿಸಿದ್ದಾರೆ.

ಚಾಮುಂಡಶ್ವರಿ ಶಕ್ತಿ ದೇವತೆ. ಶಕ್ತಿ ಸ್ವರೂಪಿಣಿ. ಅಂತಹ ಶಕ್ತಿ ದೇವತೆಯನ್ನು ಈ ನಾಡಿನ ಹೆಣ್ಣು ಮಗಳೊಬ್ಬಳು ಅದೂ ಮುಖ್ಯಮಂತ್ರಿಯ ಪತ್ನಿಯಾಗಿ ಉಷಾ ಅವರು ಪುಷ್ಪಾರ್ಚನೆ ಮಾಡಿದರೆ ತಪ್ಪೇನು? ಚಾಮುಂಡೇಶ್ವರಿಯೂ ಹೆಣ್ಣು. ಅಂತಹ ಶಕ್ತಿ ದೇವತೆಗೆ ಮಹಿಳೆಯಿಂದ ಪುಷ್ಪಾರ್ಚನೆಯಾಗಿರುವುದು ನಾಡಿನ ಹೆಣ್ಣುಮಕ್ಕಳಿಗೆ ಸಿಕ್ಕ ಗೌರವವಲ್ಲದೇ ಬೇರೇನಲ್ಲ.ಗಾಂಧೀಜಿಯ ರಾಮರಾಜ್ಯದಲ್ಲಿ ಸ್ತ್ರೀಯರಿಗೆ ಸಮಾನ ಅವಕಾಶ ನೀಡಲಾಗಿದೆ. ಅದರಂತೆ ಕಾಂಗ್ರೆಸ್ನಲ್ಲಿಯೂ ಸ್ತ್ರೀಯರಿಗೆ ಸಮಾನ ಗೌರವ, ಸ್ಥಾನಮಾನ ನೀಡಲಾಗುತ್ತಿದೆ. ಆದರೆ, ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿ ಮತ್ತದರ ನಾಯಕರು ಮಾತ್ರ ಹೆಣ್ಣನ್ನು ಅವಕಾಶ ಸಿಕ್ಕಾಗಲೆಲ್ಲಾ ಅಪಮಾನಗೊಳಿಸುತ್ತಲೇ ಬರುತ್ತಿದ್ದಾರೆ. ಸೀತೆಯನ್ನು ಬಿಟ್ಟು ರಾಮನನ್ನು ಮಾತ್ರ ಪೂಜಿಸಲು ಸಾಧ್ಯವೇ. ಸೀತಾರಾಮರು ಹೇಗೆ ಒಟ್ಟಿಗೆ ಇದ್ದರೆ ಆದರ್ಶವೋ ಅದೇ ರೀತಿ, ಶಿವಕುಮಾರ್, ಉಷಾ ಅವರೂ ಒಟ್ಟಿಗೆ ಶಕ್ತಿ ದೇವತೆಯನ್ನು ಪೂಜಿಸಿದ್ದಾರೆ.

ದಸರಾ ಎಂದರೆ ಕೇವಲ ಹೂವು ಎಸೆಯುವ ಹಬ್ಬವಲ್ಲ. ಅದು ನಮ್ಮ ಧಾರ್ಮಿಕ ಆಚರಣೆಯ ಪ್ರತೀಕ. ಧಾರ್ಮಿಕ ಆಚರಣೆಗಳಲ್ಲಿ ಪತಿ, ಪತ್ನಿ ಒಟ್ಟಿಗೆ ಪಾಲ್ಗೊಳ್ಳುವುದು ನಮ್ಮ ಹಿಂದೂ ಧರ್ಮದ ಸಂಪ್ರದಾಯ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂದು ಜೇಡರ ದಾಸಿಮಯ್ಯ 12ನೇ ಶತಮಾನದಲ್ಲಿ ಹೇಳಿದ್ದಾರೆ. ಧರ್ಮಾಧಾರಿತ ರಾಜಕಾರಣದಲ್ಲೇ ಮುಳುಗಿರುವ ಬಿಜೆಪಿಯವರಿಗೆ ಇಂತಹ ಸಣ್ಣ ವಿಷಯವೂ ಅರ್ಥವಾಗದಿರುವುದು ದುರಂತ ಎಂದಿದ್ದಾರೆ.

ಶ್ರೀವತ್ಸ ಅವರು ಈಗಲಾದರೂ ಸತ್ಯಾಂಶವನ್ನರಿತು ತಪ್ಪು ಹೇಳಿಕೆಯನ್ನು ಹಿಂಪಡೆಯಬೇಕು. ಇಡೀ ಸ್ತ್ರೀಕುಲದ ಕ್ಷಮೆಯನ್ನು ಕೇಳಬೇಕು. ಇತಿಹಾಸವನ್ನು ಅರಿಯದೇ, ಧಾರ್ಮಿಕ ಆಚರಣೆಗಳ ಹಿನ್ನೆಲೆ, ಮಹತ್ವ ಅರಿಯದೇ ಬೇಕಾಬಿಟ್ಟಿ ಮಾತನಾಡಿದರೆ ಅವರ ವಿರುದ್ಧ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಗೆದ್ದ ಸಿರಿಗೆರೆಯ ಎಂಟೆಕ್ ಪದವೀಧರ!
ಎನ್‌ಸಿಡಿ ತಪಾಸಣೆಯಲ್ಲಿ ಚಿಕ್ಕಮಗಳೂರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಯು.ಟಿ. ಖಾದರ್ ಅಭಿನಂದನೆ