ಅಕ್ಟೋಬರ್‌ 5ರಂದು ಬೆಂಗಳೂರಿನಲ್ಲಿ ಬೃಹತ್‌ ಪಾದಯಾತ್ರೆ: ಕುರುಬರ ಯುವ ವೇದಿಕೆ ಅಧ್ಯಕ್ಷ ಮಹಾಲಿಂಗಯ್ಯ

KannadaprabhaNewsNetwork | Updated : Oct 02 2024, 01:06 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ, ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿರುವ ಜಾಥಾ ಅಕ್ಟೋಬರ್ 4ರ ಗುರುವಾರ ತುಮಕೂರು ತಲುಪಲಿದ್ದು, ಅಕ್ಟೋಬರ್ 5 ರ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಸೇರಲಿದೆ ಎಂದು ಕುರುಬರ ಯುವ ವೇದಿಕೆ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ, ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿರುವ ಜಾಥಾ ಅಕ್ಟೋಬರ್ 4ರ ಗುರುವಾರ ತುಮಕೂರು ತಲುಪಲಿದ್ದು, ಅಕ್ಟೋಬರ್ 5 ರ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಸೇರಲಿದೆ. ಅಲ್ಲಿಂದ ವಿಧಾನಸೌಧದ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಕುರುಬರ ಯುವ ವೇದಿಕೆ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟ್ರೀಯ ಅಹಿಂದ ಸಂಘಟನೆಯ ಮುಖಂಡರಾದ ಮುತ್ತಳ್ಳಿ ಶಿವಣ್ಣ ಅವರ ನೇತೃತ್ವದಲ್ಲಿ ಸುಮಾರು ಲಕ್ಷಾಂತರ ಸಂಖ್ಯೆಯಲ್ಲಿ ಅಹಿಂದ ಕಾರ್ಯಕರ್ತರು, ಮುಖಂಡರು ಅಕ್ಟೋಬರ್ ೪ರ ಗುರುವಾರ ಸಂಜೆ ತುಮಕೂರು ತಲುಪಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ ೫ರ ಶುಕ್ರವಾರ ತುಮಕೂರಿನಿಂದ ಹೊರಟು ಫ್ರೀಡಂ ಪಾರ್ಕಿಗೆ ತಲುಪಿ, ಅಲ್ಲಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಯಲಿದೆ. ಇದು ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ತುಂಬುವ ನಿಟ್ಟಿನಲ್ಲಿ ಅಹಿಂದ ವರ್ಗಗಳು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳು ಒಗ್ಗೂಡಿ ನಡೆಸುತ್ತಿರುವ ಜಾಥಾವಾಗಿದೆ ಎಂದರು.ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದ ಸಿದ್ದರಾಮಯ್ಯ ವಿರುದ್ದ ಮುಡಾ ಮತ್ತು ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಮ್ಮ ಅವರ ವೈಯಕ್ತಿಕ ಭೂಮಿ ವಿವಾದವನ್ನು ಎಳೆದುತಂದು, ಅನಗತ್ಯ ಕಿರುಕುಳ ನೀಡುವ ಕೆಲಸವನ್ನು ವಿರೋಧಪಕ್ಷಗಳು ಕೇಂದ್ರ ಸರಕಾರದ ಬೆಂಬಲದೊಂದಿಗೆ ಮಾಡುತ್ತಿವೆ. ಹಾಗಾಗಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಾವಿದ್ದೇವೆ ಎಂಬುದನ್ನು ಸಾರುವ ಉದ್ದೇಶದಿಂದ ಈ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಹಿತೈಷಿಗಳು, ಅಭಿಮಾನಿಗಳು ಅಹಿಂದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಿದ್ದರಾಮಯ್ಯ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಅಹಿಂದ ಮಹಿಳಾ ಘಟಕದ ಅಧ್ಯಕ್ಷ ಸುಕನ್ಯ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವಿತ ಅವಧಿಯಲ್ಲಿ ಎಂದಿಗೂ ಕಿಚನ್ ಕ್ಯಾಬಿನೆಟ್‌ಗೆ ಅವಕಾಶ ನೀಡಿದವರಲ್ಲ. ಇಂತಹ ವ್ಯಕ್ತಿಯ ವಿರುದ್ದ ಅರಿಶಿನ ಕುಂಕುಮಕ್ಕೆಂದು ಪತ್ನಿಗೆ ಸಹೋದರ ನೀಡಿದ್ದ ಭೂಮಿ ವಿಚಾರವಾಗಿ ವಿವಾದ ಮಾಡಿ, ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಬಿಜೆಪಿ-ಜೆಡಿಎಸ್ ಮಾಡುತ್ತಿದೆ ಎಂದರು.ಬೆಂಗಳೂರಿನಲ್ಲಿ ನಡೆಯುವ ಪಾದಯಾತ್ರೆಗೆ ತುಮಕೂರಿನಿಂದ ಅಹಿಂದ ಕಾರ್ಯಕರ್ತರು, ಮುಖಂಡರು ಹೊರಡಲು ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಅಹಿಂದ ವರ್ಗದವರು, ಸಿದ್ದರಾಮಯ್ಯ ಹಿತೈಷಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪಾದಯಾತ್ರೆ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆದಿಲ್, ಅಹಿಂದ ರಾಷ್ಟ್ರೀಯ ಸಂಘಟನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸುನಿತಾ ನಟರಾಜ್, ನಿರ್ದೇಶಕರಾದ ಪ್ರೇಮ, ಲಕ್ಷ್ಮಿನಾರಾಯಣ ರಾಗಿ ಮಲ್ಲೇನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article