ಕನ್ನಡಪ್ರಭ ವಾರ್ತೆ ಗುಬ್ಬಿ
ಬಿಹಾರ್ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಎನ್ ಡಿ ಎ ಕೂಟ ಸಾಧಿಸಿದ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಪಟ್ಟಣದ ಗುಬ್ಬಿ ವೀರಣ್ಣ ಸರ್ಕಲ್ ಬಳಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಸಿಹಿ ಹಂಚಿದ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ, ಮತ ಕಳ್ಳತನ ಎಂದು ಆರೋಪದ ಸುರಿಮಳೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷ ಹಾಗೂ ಮಿತ್ರ ಪಕ್ಷಕ್ಕೆ ಬಿಹಾರ್ ಚುನಾವಣೆ ತಕ್ಕ ಪ್ರತ್ಯುತ್ತರ ನೀಡಿದೆ. 75 ರಷ್ಟು ಮತಗಳು ಎನ್ ಡಿ ಎ ಮೈತ್ರಿಕೂಟಕ್ಕೆ ಬಂದ ಹಿನ್ನೆಲೆ ಬಿಹಾರ್ ರಾಜ್ಯದಲ್ಲಿ ವಿರೋಧ ಪಕ್ಷ ಅಸ್ತಿತ್ವದಲ್ಲಿ ಇಲ್ಲವಾಗಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ ಅಭೂತಪೂರ್ವ ಗೆಲುವು ನೀಡಿದ ಬಿಹಾರ ರಾಜ್ಯದ ಜನತೆಗೆ ಧನ್ಯವಾದ ಹೇಳಬೇಕಿದೆ. ಇಲ್ಲಸಲ್ಲದ ಆರೋಪ ಮಾಡುತ್ತಾ ಕಾಂಗ್ರೆಸ್ ಮೈತ್ರಿ ಘಟ ಬಂಧನ ಜನಾದೇಶಕ್ಕೆ ತಲೆ ಬಾಗಬೇಕಿದೆ. ಮುಂದಿನ ದಿನದಲ್ಲಿ ದೇಶದ ಎಲ್ಲಾ ರಾಜ್ಯದಲ್ಲೂ ಹೀಗೆಯೇ ಫಲಿತಾಂಶ ಬರಲಿದೆ. ಬಿಜೆಪಿ ಪಕ್ಷ ಹಾಗೂ ನರೇಂದ್ರ ಮೋದಿ ಅವರ ವರ್ಚಸ್ಸು ವಿರೋಧಪಕ್ಷಗಳು ಅರಿಯಬೇಕಿದೆ ಎಂದರು.ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಬಿಹಾರ ರಾಜ್ಯದಲ್ಲಿ ದೊರೆತ ಫಲಿತಾಂಶ ದೇಶದ ಜನರ ಮನಸ್ಸಿನಲ್ಲಿ ಮೋದಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಹಲವು ರಾಜ್ಯದಲ್ಲಿ ಇದೇ ಮಾದರಿ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ.ಆರ್.ಬಸವರಾಜು, ಕೃಷ್ಣಮೂರ್ತಿ, ಅನಿಲ್, ಸ್ವಾಮಿ, ಶರಣ್, ಮಲ್ಲಿಕ್, ಜೆಡಿಎಸ್ ಮುಖಂಡರಾದ ಕೆ.ಬಿ.ಕೃಷ್ಣಪ್ಪ, ಡಿ.ರಘು, ಮನೋಜ್ ಇತರರು ಇದ್ದರು.