ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಬಳಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಂಜನಗೂಡು ಸಂಚಾರ ಪೊಲೀಸರು ಬೈಕ್ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿದರು.ಪಟ್ಟಣದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಸವರಾಜು ಮಾತನಾಡಿ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡುತ್ತಿರುವುದರಿಂದ ಹೆಚ್ಚಾಗಿ ಅಪಘಾತದಿಂದ ಹೆಚ್ಚು ಸಾವು ಸಂಭವಿಸುತ್ತಿದೆ. ಆದ್ದರಿಂದ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು, ಮದ್ಯಪಾನ ಮಾಡಿ ಚಾಲನೆ ಮಾಡಬಾರದು, ಚಾಲನೆ ವೇಳೆಯಲ್ಲಿ ಮೊಬೈಲ್ ಬಳಕೆ ಮಾಡಬಾರದು, ದ್ವಿಚಕ್ರ ವಾಹನದಲ್ಲಿ ಹೆಚ್ಚು ಜನ ಪ್ರಯಾಣ ಮಾಡಬಾರದು ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ನಿಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳುವ ಜೊತೆಗೆ ಇತರರ ಜೀವಗಳನ್ನು ಉಳಿಸಬೇಕು ಎಂದು ಕರೆ ನೀಡಿದರು.
ಸಿಪಿಐ ಚಂದ್ರಶೇಖರ್ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪ್ರೆರೇಪಿಸುವ ಸಲುವಾಗಿ ಪತ್ರಕರ್ತರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಗಿದೆ ಎಂದರು.ಸಂಚಾರಿ ಪೊಲೀಸರು ಪಟ್ಟಣದ ಆರ್.ಪಿ.ರಸ್ತೆಯ ಮೂಲಕ ಹುಲ್ಲಹಳ್ಳಿ ವೃತ್ತದವರೆಗೆ ಬೈಕ್ ಜಾಥಾ ನಡೆಸಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಇದೇ ವೇಳೆ ಪತ್ರಕರ್ತರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.ಸಂಚಾರ ಪೊಲೀಸ್ ಠಾಣೆಯ ಪಿಎಸೈ ಜಯಪ್ರಕಾಶ್, ಸಿದ್ದರಾಜು, ನಗರ ಪೊಲೀಸ್ ಠಾಣೆಯ ಪಿಎಸೈ ಪ್ರಕಾಶ್, ಎಎಸೈಗಳಾದ ಶ್ರೀನಿವಾಸಮೂರ್ತಿ, ವಸಂತ್ ಕುಮಾರ್, ಸಿಬ್ಬಂದಿಗಳಾದ ಅನಂತ್, ಸಂದೇಶ್, ಮಹೇಂದ್ರ, ಮುಖಂಡರಾದ ದಿನೇಶ್, ಲಯನ್ಸ್ ಸಂಸ್ಥೆಯ ರಾಮಚಂದ್ರ ಇದ್ದರು.