ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಬೈಕ್ ರ್‍ಯಾಲಿ

KannadaprabhaNewsNetwork |  
Published : Aug 22, 2025, 12:00 AM IST
21ಕೆಎಂಎನ್ ಡಿ20 | Kannada Prabha

ಸಾರಾಂಶ

ಸಂಘಟನೆಗಳ ಬಂದ್ ಗೆ ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಮತ್ತು ಚುಂಚಶ್ರೀ ಗೆಳೆಯರ ಬಳಗ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ, ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಮತ್ತು ಹಿಂದೂ ರಕ್ಷಣಾ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಸಂಜೆ ಬೃಹತ್ ಬೈಕ್ ರ‍್ಯಾಲಿ ನಡೆಸಿದರು.

ಹಿಂದೂ ರಕ್ಷಣಾ ಸಮಿತಿ ವಿವಿಧ ಸಂಘಟನೆಗಳು ಹಾಗೂ ಧಾರ್ಮಿಕ ಚಿಂತಕರ ಬೆಂಬಲದೊಂದಿಗೆ ಶಿವಪುರ ಸೌಧದ ಆವರಣದಿಂದ ಕೇಸರಿ ಬಾವುಟಗಳನ್ನು ಹಿಡಿದು ಪ್ರಮುಖ ಬೀದಿಗಳ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೆ ನಡೆದ ಬೈಕ್ ರ್‍ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಂತರ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯ ಹಾಳು ಮಾಡುವ ದೃಷ್ಟಿಯಿಂದ ಪಟ್ಟ ಭದ್ರ ಹಿತಾಸಕ್ತಿಗಳು ಕ್ಷೇತ್ರದ ಬಗ್ಗೆ ನಿರಂತರ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿದೆ ಎಂದು ಕಿಡಿಕಾರಿದರು.

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿಂದೆ ಹಿಂದೂ ವಿರೋಧಿಗಳ ಶಕ್ತಿ ಕೆಲಸ ಮಾಡುತ್ತಿದೆ. ಇಂತಹ ಉದ್ದೇಶ ಪೂರ್ವಕ ಅಪಪ್ರಚಾರದಿಂದ 10 ಸಾವಿರ ವರ್ಷಗಳ ಇತಿಹಾಸವುಳ್ಳ ಹಿಂದೂ ಧರ್ಮವನ್ನು ಅಳಿಸುವ ಮೂಲಕ ದೇಶವನ್ನು ವಿಭಜಿಸಲು ದುಷ್ಟ ಶಕ್ತಿಗಳು ಹುನ್ನಾರ ನಡೆಸುತ್ತಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೈಕ್ ರ್‍ಯಾಲಿಯಲ್ಲಿ ಹಿಂದೂ ರಕ್ಷಣಾ ಸಮಿತಿ ಕೆ.ಎಸ್.ಮಲ್ಲಿಕಾರ್ಜುನ, ಸಿ.ಕೆ.ಸತೀಶ, ಕೆ.ಟಿ.ನವೀನ, ಎಂ.ಸಿ.ಸಿದ್ದು, ಪಿ.ಮಲ್ಲೇಶ್, ಕದಲೂರು ಯೋಗಾನಂದ, ಎಂ.ಸತೀಶ್, ತೀರ್ಥಾಚಾರ್, ಲಕ್ಷ್ಮಣಾಚಾರ್, ಎಂ.ಸತೀಶ, ಚೈತನ್ಯ ಆರಾಧ್ಯ, ಮೃತ್ಯುಂಜಯ, ಎಂ.ವೀರಭದ್ರಸ್ವಾಮಿ, ಎಂ.ಜೆ.ಅನಿಲ್, ಗೋಪಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ:

ಮದ್ದೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಆ.22ರ ಶುಕ್ರವಾರ ಹಿಂದೂ ರಕ್ಷಣಾ ಸಮಿತಿ ಮತ್ತು ಬಿಜೆಪಿ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದೆ.

ಸಂಘಟನೆಗಳ ಬಂದ್ ಗೆ ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಮತ್ತು ಚುಂಚಶ್ರೀ ಗೆಳೆಯರ ಬಳಗ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿವೆ.

ಬಂದ್ ಹಿನ್ನೆಲೆಯಲ್ಲಿ ಶ್ರೀ ನರಸಿಂಹಸ್ವಾಮಿ ದೇವಾಲಯದ ಆವರಣದಿಂದ ಸಂಘಟನೆಗಳ ಮುಖಂಡರಾದ ಕಾರ್ಯಕರ್ತರು ಪೇಟೆ ಬೀದಿ ಮೂಲಕ ತಾಲೂಕ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ವರ್ತಕರು, ಹೋಟೆಲ್ ಮಾಲೀಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ