ಎಸ್‌ಐಆರ್ ಜಾಗೃತಿಗಾಗಿ ಬೈಕ್ ರ‍್ಯಾಲಿ; ಜಿಲ್ಲಾಧಿಕಾರಿ, ಜಿಪಂ ಸಿಇಒ ಭಾಗಿ

KannadaprabhaNewsNetwork |  
Published : Jul 04, 2026, 02:00 AM IST
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ  (ಎಸ್‌ಐಆರ್)’ ಅಂಗವಾಗಿ ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿ.ಪಂ.ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮತ್ತಿತರರು ಭಾಗವಹಿಸಿದ್ದರು.  | Kannada Prabha

ಸಾರಾಂಶ

ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ.

ಬಳ್ಳಾರಿ: ಮತದಾರರ ಪಟ್ಟಿಯನ್ನು ಅತ್ಯಂತ ಪಾರದರ್ಶಕ ಮತ್ತು ದೋಷರಹಿತವಾಗಿ ಸಿದ್ಧಪಡಿಸಲು ಭಾರತೀಯ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕರು ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಸ್ವೀಪ್ ಚಟುವಟಿಕೆ ಕುರಿತು ಅರಿವು ಮೂಡಿಸಲು ನಗರದ ಹೊಸ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದಾಗ ಸರಿಯಾದ ಮಾಹಿತಿ ನೀಡಿ, ನಮೂನೆಗಳನ್ನು ಭರ್ತಿ ಮಾಡಿಕೊಡಬೇಕು ಎಂದು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರುಗಳ ನಿಖರತೆ ಕಾಪಾಡುವುದು, ಅರ್ಹ ಮತದಾರರ ಹೆಸರು ಸೇರ್ಪಡೆ, ಅನರ್ಹ ಅಥವಾ ಪುನರಾವರ್ತಿತ ಹೆಸರುಗಳ ತಿದ್ದುಪಡಿ ಹಾಗೂ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದು ಎಸ್‌ಐಆರ್ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಈ ಮನೆ-ಮನೆ ಪರಿಶೀಲನಾ ಅಭಿಯಾನವು ಜು.29ರವರೆಗೆ ನಡೆಯಲಿದೆ. ಈ ಪ್ರಕ್ರಿಯೆಯ ನಂತರ ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಸೆ.4ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಅಂತಿಮ ಪಟ್ಟಿಯು ಅ.7ರಂದು ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಬೈಕ್ ರ‍್ಯಾಲಿಯು ಹೊಸ ಜಿಲ್ಲಾಡಳಿತ ಭವನದ ಆವರಣದಿಂದ ಆರಂಭಗೊಂಡು ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ನಡೆಯಿತು.

ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಅಬಕಾರಿ ಉಪ ಆಯುಕ್ತ ಮಂಜುನಾಥ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್. ಬಸರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ- ಸಿಬ್ಬಂದಿ ಹಾಗೂ ಜಿಲ್ಲೆಯ ಬೈಕ್ ರೈಡರ್ಸ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಲ್ಲ ಘಟನೆ ಖಂಡಿಸಿ ಹಿಂದು ಜಾಗರಣ ವೇದಿಕೆ ಪ್ರತಿಭಟನೆ
ಅಗತ್ಯ ಕಂಡುಬಂದರೆ ಬರಗಾಲ ಘೋಷಣೆ ಕುರಿತು ತೀರ್ಮಾನ