ಈ ಬಾರಿ ಮುಂಗಾರು ಹಂಗಾಮಿಗೆ ತೀವ್ರ ಮಳೆಯ ಕೊರತೆ ಎದುರಾಗಿದೆ. ಗಣಿಜಿಲ್ಲೆಯ ಭತ್ತ ಬೆಳೆಯುವ ರೈತರು ಕೂರಿಗೆ ಬಿತ್ತನೆಗೆ ಮುಂದಾಗಿದ್ದಾರೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ಈ ಬಾರಿ ಮುಂಗಾರು ಹಂಗಾಮಿಗೆ ತೀವ್ರ ಮಳೆಯ ಕೊರತೆ ಎದುರಾಗಿದೆ. ಗಣಿಜಿಲ್ಲೆಯ ಭತ್ತ ಬೆಳೆಯುವ ರೈತರು ಕೂರಿಗೆ ಬಿತ್ತನೆಗೆ ಮುಂದಾಗಿದ್ದಾರೆ.
ಜಿಲ್ಲೆಯ ಪೈಕಿ ಸಂಡೂರು ಹೊರತುಪಡಿಸಿದರೆ ಸಿರುಗುಪ್ಪ, ಕಂಪ್ಲಿ, ಕುರುಗೋಡು ಹಾಗೂ ಬಳ್ಳಾರಿ ತಾಲೂಕಿನಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈ ಬಾರಿ ಮುಂಗಾರು ಹಂಗಾಮಿಗೆ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಕೂರಿಗೆ ಬಿತ್ತನೆಗೆ ರೈತರು ಮನಸ್ಸು ಮಾಡಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕೂರಿಗೆ ಬಿತ್ತನೆ ಕಾರ್ಯ ನಡೆದಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಕೂರಿಗೆ ಬಿತ್ತನೆಗೆ ರೈತರು ಮನಸ್ಸು ಮಾಡಿದ್ದಾರೆ. ಜಲಾಶಯ ಆಶ್ರಯಿಸಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಈ ಬಾರಿ ಭಾಗಶಃ ರೈತರು ಕೂರಿಗೆ ಬಿತ್ತನೆಗೆ ಮೊರೆ ಹೋಗುವ ಸಾಧ್ಯತೆಗಳಿವೆ.
ಹುಸಿಯಾದ ರೈತರ ನಿರೀಕ್ಷೆ:
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯದಿಂದಾಗಿ ಹಿಂಗಾರಿಗೆ ನೀರಿಲ್ಲದೇ ಬೆಳೆ ಕಳೆದುಕೊಂಡಿದ್ದ ರೈತರು ಮುಂಗಾರು ಮಳೆ ನಿರೀಕ್ಷಿಸಿದ್ದರು. ನಷ್ಟವನ್ನು ಈ ಮುಂಗಾರು ಹಂಗಾಮಿನಲ್ಲಿ ಸರಿದೂಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಪ್ರಕೃತಿಯೂ ಕೈಕೊಟ್ಟಿದೆ. ನಿರೀಕ್ಷಿತ ಮಳೆಯಾಗದ ಕಾರಣ ಸದ್ಯ ತುಂಗಭದ್ರಾ ಜಲಾಶಯ ಸಮರ್ಪಕವಾಗಿ ಭರ್ತಿಯಾಗಿಲ್ಲ. ಜಿಲ್ಲೆಯಲ್ಲಿ ಈ ವರೆಗೆ ವಾಡಿಕೆ ಮಳೆಯೂ ಆಗಿಲ್ಲ. ಇದರಿಂದ ಜಲಾಶಯ ಆಶ್ರಿತ ರೈತರು ಎರಡನೇ ಬೆಳೆಯ ನಷ್ಟಗೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಈಗ ಕೂರಿಗೆ ಬಿತ್ತನೆ ಮಾಡಿದ ಬೆಳೆಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿಫಾರಸು ಮಾಡಿರುವ ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.
ಮಳೆ ಅಭಾವ -ಬಿತ್ತನೆ ಕುಂಠಿತ:
ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 599.0 ಮಿ.ಮೀ. ಇದ್ದು, ಜೂನ್-30ರ ಅಂತ್ಯದ ವೇಳೆಗೆ 146.1 ಮಿ.ಮೀ. ವಾಡಿಕೆ ಮಳೆಗೆ ಎದುರಾಗಿ 140.7 ಮಿ.ಮೀ (ಶೇ. 97) ಮಳೆಯಾಗಿದೆ. ಒಟ್ಟಾರೆ ಬಿದ್ದ ಮಳೆಯ ಪ್ರಮಾಣ ಹೆಚ್ಚಾಗಿದ್ದರೂ ಮಳೆ ದಿನಗಳು ಕಡಿಮೆ ಇದೆ. ಹೆಚ್ಚು ದಿನಗಳ ಅಂತರ ಮತ್ತು ಸಮಪ್ರಮಾಣದ ಹಂಚಿಕೆ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಕೇವಲ ಶೇ. 24ರಷ್ಟು ಮಾತ್ರ ಬಿತ್ತನೆಯಾಗಿದೆ. ಸಂಡೂರು ತಾಲೂಕಿನಲ್ಲಿ 221.6 ಮಿ.ಮೀ. ವಾಡಿಕೆ ಮಳೆಗೆ ಎದುರಾಗಿ ಕೇವಲ 88.0 ಮಿ.ಮೀ ಮಳೆಯಾಗಿದ್ದು, ಶೇ. 60ರಷ್ಟು ಮಳೆ ಕೊರತೆ ಉಂಟಾಗಿದೆ. ಉಳಿದ ತಾಲೂಕುಗಳಲ್ಲೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ.
ಬೆಳೆಗಿಲ್ಲ ನೀರು-ಕುಡಿಯುವ ನೀರಿಗಷ್ಟೇ ಬಳಕೆ:
ತುಂಗಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಪ್ರಸ್ತುತ ತೀವ್ರ ಮಳೆ ಕೊರತೆ ಉಂಟಾಗಿರುವುದರಿಂದ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದಿಲ್ಲ. ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ಜಲಾಶಯದ ಬಲದಂಡೆ, ಎಡದಂಡೆ ನಾಲೆಗಳಲ್ಲಿ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲ ರೈತ ಬಾಂಧವರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಈ ಬಾರಿ ಸಾವಿರಾರು ರೈತರು ಭತ್ತದ ನಾಟಿ ಬದಲಿಗೆ ಕೂರಿಗೆ ಬಿತ್ತನೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಸಾಮಾನ್ಯ ವರ್ಷಗಳಲ್ಲಿ ಜಲಾಶಯದ ನೀರನ್ನು ಅವಲಂಬಿಸಿ ಭತ್ತದ ನಾಟಿ ನಡೆಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ನಾಟಿ ಮಾಡಲು ಸಾಧ್ಯವಾಗದೆ ಕೂರಿಗೆ ಬಿತ್ತನೆಯನ್ನೇ ಆಯ್ಕೆ ಮಾಡುತ್ತಿದ್ದಾರೆ ಎನ್ನುತ್ತಾರೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.