ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಜಿಲ್ಲೆಗಳಿಂದ ಪರಿಶೀಲನಾ ವರದಿಗಳು ಬಂದ ಬಳಿಕ ಅಗತ್ಯ ಕಂಡುಬಂದರೆ ಬರಗಾಲ ಘೋಷಣೆ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈಗಾಗಲೇ ಬಿತ್ತನೆ ಮಾಡಿರುವ ರೈತರು ಮಳೆ ಕೊರತೆಯಿಂದ ನಷ್ಟ ಅನುಭವಿಸಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ವರದಿ ಆಧರಿಸಿ ರೈತರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸವಣೂರು ಏತ ನೀರಾವರಿ ಯೋಜನೆಯನ್ನು ಮರುಚಾಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ಪುನರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ನರೇಗಲ್ಲನ ಹಲ್ಲೆ ಪ್ರಕರಣ ಹಾಗೂ ರಟ್ಟಿಹಳ್ಳಿಯ ಕೊಲೆ ಪ್ರಕರಣಗಳು ವೈಯಕ್ತಿಕ ದ್ವೇಷದಿಂದ ನಡೆದಿದ್ದು, ಅವುಗಳನ್ನು ಕೋಮು ಗಲಭೆ ಎಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಹೊಸ ಗೃಹ ಸಚಿವರು ಇಂತಹ ಪ್ರಕರಣಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ನಿಲುವು ಹೊಂದಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ರಾಜಿ ಮಾಡುವುದಿಲ್ಲ ಎಂದು ತಿಳಿಸಿದರು.

ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಇನ್ನೂ ಹಲವು ಕಡೆ ಪೂರ್ಣಗೊಂಡಿಲ್ಲ. ಕಾಮಗಾರಿ ಸಂಪೂರ್ಣ ಮುಗಿದಿರುವ ಯೋಜನೆಗಳನ್ನು ಮಾತ್ರ ಇಲಾಖೆಗಳು ಹಸ್ತಾಂತರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.