ಹಾವೇರಿ: ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಿರುವ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಜಿಲ್ಲಾದ್ಯಂತ ಮೋಡ ಬಿತ್ತನೆ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜು.7ರಿಂದ ಸತತ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಕೇಳಲಾಗಿತ್ತು. ಇಂದಷ್ಟೇ ಅವಕಾಶ ನೀಡಿರುವ ಮಾಹಿತಿ ಬಂದಿದೆ.

ಮೋಡ ಬಿತ್ತನೆ ಕಾರ್ಯಕ್ಕಾಗಿಯೇ ಅಮೆರಿಕದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ವಿಮಾನವನ್ನು ಬಳಸಲಾಗುತ್ತಿದ್ದು, ಸೋಮವಾರವೇ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ. ಈ ಕಾರ್ಯಾಚರಣೆಗಾಗಿ ಈಗಾಗಲೇ ಪೈಲಟ್‌ಗಳಿಗೆ ವಿಶೇಷ ತರಬೇತಿಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಮೋಡ ಬಿತ್ತನೆ ಮಾಡಲು ರಾಜ್ಯ ಸರ್ಕಾರ ಟೆಂಡರ್‌ ಕರೆಯಬೇಕಿದೆ. ಅದಕ್ಕೆ ಸಮಯ ತಗಲುವುದರಿಂದ ಜಿಲ್ಲೆಯ 6 ಶಾಸಕರೇ ಸೇರಿ 8 ತಾಲೂಕುಗಳಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಮಾಡುತ್ತೇವೆ. ಒಂದು ತಾಸಿನ ಕಾರ್ಯಾಚರಣೆಗೆ ₹15 ಲಕ್ಷ ವೆಚ್ಚವಾಗಲಿದೆ. ಈ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ. ಜಿಲ್ಲೆಯ ರೈತರು ಮಳೆ ಕೊರತೆಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಈ ನಿರ್ಧಾರ ಮಾಡಲಾಗಿದೆ. ಸೋಮವಾರ ವಿಮಾನ ಬರಲಿದ್ದು, ಆಕಾಶದಲ್ಲಿ ಮೋಡಗಳ ಲಭ್ಯತೆಯನ್ನು ಪರಿಶೀಲಿಸಿ, ಜು. 7ರಂದಲೇ ಮೋಡ ಬಿತ್ತನೆ ಆರಂಭಿಸಲಾಗುವುದು. ಮಳೆ ತರುವ ಮೋಡಗಳು ಸೂಕ್ತ ಪ್ರಮಾಣದಲ್ಲಿದ್ದಾಗ ಮಾತ್ರ ಬಿತ್ತನೆ ಪ್ರಕ್ರಿಯೆ ಯಶಸ್ವಿಯಾಗುವುದರಿಂದ, ಹವಾಮಾನದ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ನಡೆಸಲು ತಂಡ ಸಜ್ಜಾಗಿದೆ ಎಂದು ಪ್ರಕಾಶ ಕೋಳಿವಾಡ ತಿಳಿಸಿದರು.