ಹಾನಗಲ್ಲ: ತಾಲೂಕಿನ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಶುಕ್ರವಾರ ನರೇಗಲ್ಲ ನಡೆದ ಘಟನೆಯನ್ನು ಖಂಡಿಸಿ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಹಿಂದು ಜಾಗರಣ ವೇದಿಕೆ ಉತ್ತರ ಪ್ರಾಂತ ಸಹಸಂಯೋಜಕ ಶ್ರೀಕಾಂತ ಹೊಸಕೇರಿ, ನರೇಗಲ್ಲಿನಲ್ಲಿ ಮತಾಂಧರು ಪೂರ್ವ ನಿಯೋಜಿತವಾಗಿ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಸರ್ಕಾರ ತಪ್ಪಿತಸ್ಥರನ್ನು ಬಂಧಿಸದೇ ಒಂದು ಸಮುದಾಯದ ತುಷ್ಟೀಕರಣಕ್ಕೆ ಪುಷ್ಟಿ ನೀಡುತ್ತಿದೆ, ಈ ಪ್ರಕರಣವನ್ನು ಪೊಲೀಸ್ ಹಾಗೂ ಆಡಳಿತ ಪಕ್ಷ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಿದೆ ಎಂದರು.

ಹಿಂದುಗಳ ಸಂಭ್ರಮ ಸಂಪ್ರದಾಯ ಹತ್ತಿಕ್ಕುವ ಹುನ್ನಾರ ನಡೆದಿದೆ. ಹಿಂದುಗಳ ಮೇಲೆ ಗದಾಪ್ರಹಾರ ನಡೆದಿದೆ. ಕಾಣದ ಕೈಗಳು ನರೇಗಲ್ಲ ಘಟನೆಯ ಹಿಂದೆ ಇವೆ. ರಾಜಕಾರಣಿಗಳಂತೆ ವರ್ತಿಸುತ್ತಿರುವ ಪೊಲೀಸ್ ವ್ಯವಸ್ಥೆ ಹಿಂದುಗಳ ರಕ್ಷಣೆಗೆ ಮುಂದಾಗುತ್ತಿಲ್ಲ. ೨೬ ಆರೋಪಿಗಳೆಂದು ಪ್ರಕರಣ ದಾಖಲಾಗಿದ್ದರೂ ಕೂಡ ಕೇವಲ ೫ ಜನರನ್ನು ಬಂಧಿಸಿ ಉಳಿದವರನ್ನು ಬಂಧಿಸುತ್ತಿಲ್ಲ. ಮತಾಂಧ ಶಕ್ತಿ ತಡೆಯಲು ಆಡಳಿತ ಪಕ್ಷ ಹಿಂದೇಟು ಹಾಕುತ್ತಿದೆ ಎಂದು ದೂರಿದರು.ನರೇಗಲ್ಲಿನಲ್ಲಿ ಮುಸ್ಲಿಂ ಸಮುದಾಯ ಹಿಂದುಗಳ ಮೇಲೆ ಇಂತಹ ಹಲವು ಪ್ರಕರಣಕ್ಕೆ ಸಾಕ್ಷಿಯಾಗಿದೆ. ಪೊಲೀಸ್ ಕೂಡ ಹಬ್ಬದ ದಿನದಂದು ಹಿಂದುಗಳಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ನಾವು ಈಗ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹಿಂದು ಸಮಾಜ ಇದಕ್ಕೆ ಸರಿಯಾದ ಉತ್ತರ ಕೊಡುತ್ತದೆ. ಹಾನಗಲ್ಲ ಹಿರೂರು, ಅಕ್ಕಿಆಲೂರು, ನರೇಗಲ್ಲ ಆದಿಯಾಗಿ ಇಡೀ ತಾಲೂಕಿನಾದ್ಯಂತ ಇಂತಹ ಪ್ರಕರಣಗಳು ನಿರಂತರವಾಗಿ ನಡೆದಿವೆ. ಶೀಘ್ರ ಅಕ್ಕಿಆಲೂರಿನಲ್ಲಿ ಇನ್ನೊಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಈವರೆಗೂ ಹಾನಗಲ್ಲ ತಹಸೀಲ್ದಾರರು ನರೇಗಲ್ಲಿಗೆ ತೆರಳಿ ಹಲ್ಲೆಗೊಳಗಾದ ಕುಟುಂಬಗಳ ಬಗ್ಗೆ ಅನುಕಂಪವನ್ನೂ ತೋರಿಸಿಲ್ಲ. ಅವರ ರಕ್ಷಣೆಗೂ ಕ್ರಮ ಕೈಗೊಂಡಿಲ್ಲ. ಕೂಡಲೇ ಹಾನಗಲ್ಲ ತಹಸೀಲ್ದಾರರು ನರೇಗಲ್ಲ ಘಟನೆಯಲ್ಲಿ ಹಲ್ಲೆಗೊಳಗಾದ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಹಾನಗಲ್ಲ, ಸಹ ಸಂಚಾಲಕ ನಾಗರಾಜ ಹೆಬ್ಬಾರ, ರವಿಚಂದ್ರ ಪುರೋಹಿತ, ಲಿಖಿತ ಹದಳಗಿ, ಶಿವನಾಗ, ಶಿವು ಮ್ಯಾದಾರ, ಯಲ್ಲಪ್ಪ ಮನಗೌಡರ, ಸಚಿನ ರಾಮಣ್ಣನವರ, ವಿಶ್ವ ಬಾಳೂರ, ಮನೋಜ ಕಲಾಲ, ಚಂದ್ರ ತೆರದಹಳ್ಳಿ, ಮನೋಜ ಕಮಾಟಿ, ನಾರಾಯಣ ಸಾವಂತ, ಹಿಂದು ಧ್ವಜ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ ಕಮಡೊಳ್ಳಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ವಿನಾಯಕ ಕುರುಬರ, ಕೃಷ್ಣಾ ಈಳಿಗೇರ, ಸಿದ್ದಲಿಂಗೇಶ ತುಪ್ಪದ, ಈರಣ್ಣ ನಿಂಬಣ್ಣನವರ, ಅಣ್ಣಪ್ಪ ಚಾಕಾಪುರ ಮೊದಲಾದವವರು ಪ್ರತಿಭಟನೆಯಲ್ಲಿದ್ದರು.