ಹಾವೇರಿ: ಪ್ರಸ್ತುತ ರಾಜ್ಯದಲ್ಲೇ ಹಾವೇರಿ ಜಿಲ್ಲೆಯಲ್ಲಿ ಮಳೆ ಸ್ವಲ್ಪ ಚೆನ್ನಾಗಿ ಆಗಿದೆ. ಬರುವ ಎರಡು ತಿಂಗಳ ನಂತರ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಮೇಲುಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಾವೇರಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನೂರು ವರ್ಷಗಳ ನಂತರ ಇಂತಹ ಬರಗಾಲ ಬಂದಿದ್ದು, ಇಲ್ಲಿನ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆ ತುಂಬಿಸುವುದು ಬಹಳ ಸೂಕ್ತವಾಗಿದ್ದು, ಈಗ ವರದಾ ನದಿಯಲ್ಲಿ ನೀರು ಬರುತ್ತಿದೆ, ಇಂದಿನಿಂದಲೇ ಕೆರೆ ತುಂಬಿಸುವ ಕಾರ್ಯ ಆರಂಭಿಸಬೇಕು. ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿಯಿಂದ ಹಂತ ಹಂತವಾಗಿ ಒಂದು ಟ್ಯಾಂಕರ್ ಖರೀದಿಸಿ, ಇದರಿಂದ ತುಂಬಾ ಅನುಕೂಲವಾಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಪ್ರತಿ ಗ್ರಾಪಂನಲ್ಲಿ ಟ್ಯಾಂಕರ್ ಖರೀದಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಹೊಸ ಬ್ಯಾರೇಜ್ ನಿರ್ಮಾಣ ಮಾಡಲು ಎಲ್ಲೆಲ್ಲಿ ಅವಕಾಶವಿದೆ ಎಂದು ಪಟ್ಟಿಮಾಡಿ ಜಿಲ್ಲಾಧಿಕಾರಿಗೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯ ರೈತರಿಗೆ ಸಮಗ್ರ ಬೇಸಾಯ ಪದ್ಧತಿ ಕುರಿತು, ಯೂರಿಯಾ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುವ ಕುರಿತು ಜಾಗೃತಿ ಮೂಡಿಸಿ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸಭೆ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ, ಬ್ಯಾಡಗಿ ಶಾಸಕ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಶಾಸಕರಾದ ಶ್ರೀನಿವಾಸ ಮಾನೆ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿಳಂಬ, ಬರುವ ದಿನಗಳಲ್ಲಿ ರೈತರಿಗೆ ಗೊಬ್ಬರದ ಸಮಸ್ಯೆ ಉಂಟಾಗಬಹುದು, ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಬರುವ ದಿನಗಳಲ್ಲಿ ಅಂತರ್ಜಲಮಟ್ಟ ಕಡಿಮೆಯಾದಾಗ ಪರ್ಯಾಯ ಕ್ರಮ, ಬೆಳೆಹಾನಿ, ಬೆಳೆಪರಿಹಾರ ವಿಳಂಬ, ಬೆಳೆ ಮಿಸ್‌ಮ್ಯಾಚ್ ಪ್ರಕರಣ ಪರಿಹಾರ ವಿಳಂಬದ ಕುರಿತು ಸಚಿವರ ಗಮನಕ್ಕೆ ತಂದರು. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಜೂ. 1ರಿಂದ ಜು. 1ರ ವರೆಗೆ 125.20 ಮಿಮೀ ವಾಡಿಕೆ ಮಳೆಗೆ 55.50 ಮಿಮೀ ಮಳೆಯಾಗಿದ್ದು, 55.67 ಮಿ.ಮೀ. ಕಡಿಮೆ ಮಳೆಯಾಗಿದೆ. ಭದ್ರಾ ಜಲಾಶಯದಿಂದ ಆರು ಸ್ಥಳೀಯ ಸಂಸ್ಥೆಗಳಿಗೆ, 9 ಬಹುಗ್ರಾಮ ಯೋಜನೆಯಡಿ ಬರುವ 172 ಗ್ರಾಮಗಳಿಗೆ, ವರದಾ ನದಿಯಿಂದ ಮೂರು ನಗರ ಸ್ಥಳಿಯ ಸಂಸ್ಥೆಗಳಿಗೆ, 9 ಬಹುಗ್ರಾಮ ಯೋಜನೆಯಡಿ ಬರುವ 95 ಗ್ರಾಮಗಳಿಗೆ ಹಾಗೂ ಧರ್ಮಾ ಜಲಾಶಯದಿಂದ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರಸ್ತುತ ನಗರ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ದಲ್ಜಿತ್ ಕುಮಾರ, ಜಿಪಂ ಉಪಕಾರ್ಯದರ್ಶಿ ಡಾ. ಪುನೀತ್ ಮಾತನಾಡಿದರು. ಸಭೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಅಜೀಮ್‌ಪೀರ್ ಎಸ್. ಖಾದ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಇದ್ದರು.ಮಿಸ್ ಮ್ಯಾಚ್ ಆಗದಂತೆ ನೋಡಿಕೊಳ್ಳಿ: ಬೆಳೆವಿಮೆ ಪರಿಹಾರ ಪ್ರಕರಣಗಳಲ್ಲಿ ಬೆಳೆ ಮಿಸ್ ಮ್ಯಾಚ್‌ನಿಂದ ರೈತರಿಗೆ ಪರಿಹಾರ ವಿಳಂಬವಾಗುತ್ತಿದೆ. ಅದೇ ರೀತಿ ರೈತರು ಬೆಳೆವಿಮೆ ನೋಂದಣಿಗೆ ಪರಿಹಾರ ಕಡಿಮೆ, ಏಜೆಂಟರು ಬೆಳೆವಿಮೆ ನೋಂದಣಿಗೆ ಹೆಚ್ಚಿನ ಪರಿಹಾರ ಕುರಿತು ಎಲ್ಲಕಡೆ ದೂರುಗಳಿವೆ. ಇನ್ನು ಮುಂದೆ ಇಂತಹ ಪ್ರಕರಣಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಸೂಚನೆ ನೀಡಿದರು.