ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಬೈಕ್ ರ‍್ಯಾಲಿ

KannadaprabhaNewsNetwork | Published : Feb 27, 2025 12:31 AM

ಸಾರಾಂಶ

ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದೆ. ಸಂವಿಧಾನ ಪೀಠದ ಆದೇಶ ಬಂದು ಆರೇಳು ತಿಂಗಳ ನಂತರವೂ ಒಳ ಮೀಸಲಾತಿಯನ್ನು ಮಾದಿಗರಿಗೆ ರಾಜ್ಯ ಸರ್ಕಾರ ನೀಡುವಲ್ಲಿ ಕಾಲಹರಣ ಮಾಡುತ್ತಿದೆ.

ಕಾರಟಗಿ:

ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿ ಸೇರಿದಂತೆ ಮಾದಿಗರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಿ. ಹುಸೇನಪ್ಪ ಸ್ವಾಮಿ ಮಾದಿಗ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾದಿಗ ಸಮಾಜದ ಜಾಗೃತಿಗಾಗಿ ಮಂಗಳವಾರ ಹಮ್ಮಿಕೊಂಡ ಬೈಕ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮಾ. ೧೨ರಂದು ಕೊಪ್ಪಳ ನಗರದ ಡಾ. ಬಾಬು ಜಗಜೀವನರಾಮ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ನಡೆಸಲಾಗುವುದು ಎಂದರು.

ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದೆ. ಸಂವಿಧಾನ ಪೀಠದ ಆದೇಶ ಬಂದು ಆರೇಳು ತಿಂಗಳ ನಂತರವೂ ಒಳ ಮೀಸಲಾತಿಯನ್ನು ಮಾದಿಗರಿಗೆ ರಾಜ್ಯ ಸರ್ಕಾರ ನೀಡುವಲ್ಲಿ ಕಾಲಹರಣ ಮಾಡುತ್ತಿದೆ ಎಂದು ಕಿಡಿಕಾರಿದರು.

ಈ ರೀತಿ ಸರ್ಕಾರದ ನಿರ್ಲಕ್ಷ್ಯದಿಂದ ನಮ್ಮ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯ ಮುಂದುವರಿಕೆಗೆ ಸಾಕ್ಷಿಯಾಗಿದೆ. ಸದನದಲ್ಲಿ ಈ ಕುರಿತು ಜಿಲ್ಲೆಯ ಅಷ್ಟೇ ಅಲ್ಲ, ಇಡೀ ರಾಜ್ಯದ ಶಾಸಕರು, ಸಚಿವರು ಧ್ವನಿಯೆತ್ತಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾದಿಗ ಸಮುದಾಯವನ್ನು ಜಾಗೃತಗೊಳಿಸಿ, ಅಣಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ತಾಲೂಕು ಕೇಂದ್ರ ಸೇರಿದಂತೆ ಗ್ರಾಮ, ಕ್ಯಾಂಪ್‌ಗಳಿಗೆ ತೆರಳಿ ಸಮುದಾಯವನ್ನು ಜಾಗೃತಿಗೊಳಿಸಲು ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳು ಬೈಕ್ ರ‍್ಯಾಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಬಳಿಕ ರಾಜ್ಯ ಕಾರ್ಯದರ್ಶಿ ಹೇಮರಾಜ್ ವೀರಾಪುರ, ಜಿಲ್ಲಾಧ್ಯಕ್ಷ ಡಿ. ಹುಲ್ಲೇಶ ಬೂದಗುಂಪಾ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಸಿದ್ದಾಪುರ, ಡಿಎಸ್‌ಎಸ್‌ನ ಜಮದಗ್ನಿ ಚೌಡಕಿ ಮಾತನಾಡಿದರು.

ಈ ವೇಳೆ ಪದಾಧಿಕಾರಿಗಳಾದ ಹನುಮಂತಪ್ಪ ಲಾಯದುಣಸಿ, ರಾಮಣ್ಣ ಮಾದಿಗ, ಅಂಜಿನೆಪ್ಪ ಈಳಿಗನೂರು, ಗಾಳೇಶ ಕಾರಟಗಿ, ಸ್ವಾಮಿ ಬೂದಗುಂಪಾ, ಹುಲಗಪ್ಪ ಗುಂಡೂರು, ಮಹೇಶ ಹಳೇಮನಿ, ಕರಿಯಪ್ಪ ಬೂದಗುಂಪಾ, ಯಮನೂರ, ಮರಿಸ್ವಾಮಿ, ಜಡಿಯಪ್ಪ, ದ್ಯಾವಣ್ಣ, ವೀರೇಶ, ಶರಣಪ್ಪ ಸೋಮನಾಳ, ಪರುಶರಾಮ ನಂದಿಹಳ್ಳಿ, ಹುಲಗಪ್ಪ ಸಿದ್ದಾಪುರ, ಶಿವಪ್ಪ ಶ್ರೀರಾಮನಗರ, ಆಲಂಭಾಷಾ, ಚಿನ್ನಿ, ಜಂಬಪ್ಪ, ಗೋಪಾಲ, ಮದುಕಣ್ಣ ಗುಡೂರು, ಹುಸೇನಪ್ಪ ಹಣವಾಳ, ಲಕ್ಷ್ಮಣ ಹಣವಾಳ, ಶಾಂತಕುಮಾರ ಇನ್ನಿತರರು ಇದ್ದರು.

Share this article