ಬಂಡೀಪುರ ಅರಣ್ಯ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ಪ್ರವಾಸಿಗರು ಕಾರು ನಿಲ್ಲಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಇದೀಗ ಸಫಾರಿ ರಸ್ತೆಯಲ್ಲಿ ಅಕ್ರಮವಾಗಿ ಜಾಲಿ ಬೈಕ್ ರೈಡ್ ಮಾಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಪರಿಸರ ಸೂಕ್ಷ್ಮ ಪ್ರದೇಶದೊಳಗೆ ರೌಡಿ ಶೀಟರ್ ಸೇರಿದಂತೆ ಮೂವರು ಎಣ್ಣೆ ಪಾರ್ಟಿ ನಡೆಸಿದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಮಿಳುನಾಡು ಮೂಲದ ಬೈಕ್ ಸವಾರರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಸಫಾರಿ ರಸ್ತೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಬೈಕ್ ರೈಡ್ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ. ಈ ಜಾಲಿ ರೈಡ್ ಬಂಡೀಪುರ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.
ಬಂಡೀಪುರ ಕ್ಯಾಂಪಸ್ ಬಳಿಯ ಸಫಾರಿ ಮಾರ್ಗದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಪ್ರವಾಸಿಗರು ಗಮನಿಸಿದ್ದಾರೆ. ಹುಲಿ ಹಾಗೂ ಇತರೆ ವನ್ಯಜೀವಿಗಳ ತಾಣವಾದ ಈ ನಿರ್ಬಂಧಿತ ಪ್ರದೇಶದಲ್ಲಿ ಬೈಕ್ ಸವಾರರು ಅರಣ್ಯ ಇಲಾಖೆಯ ನಿಯಮ ಉಲ್ಲಂಘಿಸಿ ಕಾಡಿನೊಳಗೆ ಬೈಕ್ ರೈಡ್ ಮಾಡುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.
ಕಾಡಿನೊಳಗೆ ಬೈಕ್ ರೈಡ್ ಕಂಡ ಕೆಲ ಪ್ರವಾಸಿಗರು ಕಾಡಿನೊಳಗೆ ತೆರಳದಂತೆ ಎಚ್ಚರಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಬೈಕ್ ಸವಾರರು ಸಫಾರಿ ರಸ್ತೆಯಲ್ಲಿ ಸುಮಾರು ಎರಡು ಕಿಮೀ ದೂರದವರೆಗೆ ಸಂಚರಿಸಿ ಬಳಿಕ ಅದೇ ಮಾರ್ಗದಲ್ಲಿ ಹಿಂದಿರುಗಿದ್ದಾರೆ.
ಈ ದೃಶ್ಯವನ್ನು ಕೆಲ ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಾಹಿತಿ ತಿಳಿದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಬೈಕ್ ಸವಾರರು ತಮಿಳುನಾಡಿನ ಕೆಕ್ಕನಹಳ್ಳ ಚೆಕ್‌ಪೋಸ್ಟ್ ಮಾರ್ಗವಾಗಿ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಹೆದ್ದಾರಿ ಮೂಲಕ ತೆರಳಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಸಂಬಂಧ ಬೈಕ್‌ನ ನೋಂದಣಿ ಸಂಖ್ಯೆ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು, ಬೈಕ್ ಹಾಗೂ ಸವಾರರ ಮಾಹಿತಿಯನ್ನು ಮದುಮಲೈ ಅರಣ್ಯಾಧಿಕಾರಿಗಳು ಹಾಗೂ ತಮಿಳುನಾಡು ಪೊಲೀಸರಿಗೆ ರವಾನಿಸಿದ್ದಾರೆ.
----------------
ಬಂಡೀಪುರ ಸಫಾರಿ ರಸ್ತೆಯಲ್ಲಿ ತಮಿಳುನಾಡು ಮೂಲದ ಬೈಕ್ ಸವಾರರು ಅಕ್ರಮವಾಗಿ ಪ್ರವೇಶ ಬೈಕ್ ರೈಡ್ ಮಾಡಿದ್ದಾರೆ. ಬೈಕ್ ನಂಬರ್ ಆಧಾರಿಸಿ ಸಫಾರಿ ಮಾರ್ಗ ಪ್ರವೇಶಿಸಿದವರನ್ನು ಗುರುತಿಸಿ,ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಫಾರಿ ಬಳಿಕ ಸಫಾರಿ ಗೇಟ್ ಬೀಗ ಹಾಕಲಾಗುವುದು.
-ಎಲ್.ನಂದೀಶ್,ಡಿಸಿಎಫ್,ಬಂಡೀಪುರ
-------------
ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ!
ಬಂಡೀಪುರ ಅರಣ್ಯ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ಪ್ರವಾಸಿಗರು ಕಾರು ನಿಲ್ಲಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಇದೀಗ ಸಫಾರಿ ರಸ್ತೆಯಲ್ಲಿ ಅಕ್ರಮವಾಗಿ ಜಾಲಿ ಬೈಕ್ ರೈಡ್ ಮಾಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಪರಿಸರ ಸೂಕ್ಷ್ಮ ಪ್ರದೇಶದೊಳಗೆ ರೌಡಿ ಶೀಟರ್ ಸೇರಿದಂತೆ ಮೂವರು ಎಣ್ಣೆ ಪಾರ್ಟಿ ನಡೆಸಿದಾರೆ. ಇದೆಲ್ಲ ಗಮನಿಸಿದರೆ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಕಾಡಿನೊಳಗೆ ರೌಡಿ ಶೀಟರ್ ಎಣ್ಣೆ ಪಾರ್ಟಿ ನಡೆಸಿದ ತಪ್ಪಿಗೆ ವಲಯ ಅರಣ್ಯಾಧಿಕಾರಿಯೊಬ್ಬರು ಅಮಾನತ್ತು ಗೊಂಡಿದ್ದರು. ಇದೀಗ ಹೆದ್ದಾರಿಯಲ್ಲಿ ಪ್ರವಾಸಿಗರ ಕೀಟಲೆ ಜೊತೆಗೆ ಬೈಕ್ ಸವಾರರು ಕಾಡಿನೊಳಗೆ ಅಕ್ರಮ ಪ್ರವೇಶಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.