ಕುಟುಂಬದ ಹಿತಕ್ಕಾಗಿ ಬೈಕ್‌ ಸವಾರರು ಹೆಲ್ಮೆಟ್‌ ಧರಿಸಬೇಕು: ನಿರಂಜನಗೌಡ

KannadaprabhaNewsNetwork | Published : Jan 14, 2024 1:32 AM

ಸಾರಾಂಶ

ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಭಯಕ್ಕಿಂತಲೂ ಕುಟುಂಬದ ಒಳಿತಿಗಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು,ಅಪಘಾತ ಸಂಭವಿಸುವುದು ಆಕಸ್ಮಿಕವಾದರೂ ವಾಹನ ಚಾಲನೆಯಲ್ಲಿ ಪಾಲನೆ ಮಾಡಬೇಕಾದ ನಿಯಮಗಳ ಬಗ್ಗೆ ಅರಿವು ಮೂಡಿಸಿ ಅಪಘಾತ ಪ್ರಮಾಣ ತಗ್ಗಿಸುವ ಉದ್ದೇಶ ಹೊಂದಿದ್ದೇವೆ. ಪ್ರತಿಯೊಬ್ಬರು ಬೈಕ್ ಚಾಲನೆ ಮಾಡುವಾಗ ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನಗೌಡ ಹೇಳಿದರು.

- ಪೊಲೀಸ್ ಠಾಣೆ ಮುಂಭಾಗದಲ್ಲಿ ಬೈಕ್ ಸವಾರರಿಗೆ , ಸಾರ್ವಜನಿಕರಿಗೆ ಹೆಲ್ಮೆಟ್‌ ಅರಿವು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಭಯಕ್ಕಿಂತಲೂ ಕುಟುಂಬದ ಒಳಿತಿಗಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನಗೌಡ ಹೇಳಿದರು.ಪೊಲೀಸ್ ಠಾಣೆ ಮುಂಭಾಗ ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದ ಬೈಕ್ ಚಾಲಕರು ಹಾಗೂ ಸಾರ್ವಜನಿಕರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾದ ಹಾಗೂ ಪ್ರಮುಖ ಸ್ಥಳಗಳಲ್ಲಿ ಕಳೆದ ಕೆಲವು ದಿನಗಳಿಂದ ಪೊಲೀಸರನ್ನು ನಿಯೋಜಿಸಿ ವಾಹನ ಚಾಲನೆ ಮಾಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿತ್ತು. ಆದರೆ ಇದರಿಂದ ಪರಿಸ್ಥಿತಿ ಸುಧಾರಿಸಿರಲಿಲ್ಲ. ಹಾಗಾಗಿ ಇಂದು ಹೆಲ್ಮೆಟ್ ಧರಿಸದೆ ಚಾಲನೆ ಮಾಡುವವರಿಗೆ 500 ರು. ದಂಡ ವಿಧಿಸಲಾಗಿದೆ. ಅಲ್ಲದೆ ಹೆಲ್ಮೆಟ್ ಮಾರಾಟಗಾರರನ್ನು ಕರೆಸಿ ಹೆಲ್ಮೆಟ್ ಕೊಡಿಸುವ ಕೆಲಸ ಮಾಡಲಾಗಿದೆ ಎಂದರು. ಅಪಘಾತ ಸಂಭವಿಸುವುದು ಆಕಸ್ಮಿಕವಾದರೂ ವಾಹನ ಚಾಲನೆಯಲ್ಲಿ ಪಾಲನೆ ಮಾಡಬೇಕಾದ ನಿಯಮಗಳ ಬಗ್ಗೆ ಅರಿವು ಮೂಡಿಸಿ ಅಪಘಾತ ಪ್ರಮಾಣ ತಗ್ಗಿಸುವ ಉದ್ದೇಶ ಹೊಂದಿದ್ದೇವೆ. ಪ್ರತಿಯೊಬ್ಬರು ಬೈಕ್ ಚಾಲನೆ ಮಾಡುವಾಗ ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಬೇಕು. ಯಾವುದೇ ಕಾರಣಕ್ಕೂ ಅಪ್ರಾಪ್ತರಿಗೆ ವಾಹನ ಚಾಲನೆ ನೀಡಬಾರದು. ಒಂದು ವೇಳೆ ಅನಾಹುತವಾದರೆ ದೊಡ್ಡ ಮೊತ್ತದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಪ್ರಾರಂಭದಲ್ಲಿ ದಂಡ ವಿಧಿಸಿ ಅರಿವು ಮೂಡಿಸ ಲಾಗುತ್ತದೆ. ಮುಂದೆಯೂ ಇದೇ ಪ್ರವೃತ್ತಿ ಮುಂದುವರೆದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜ್ಯೋತಿ ಉಪಸ್ಥಿತರಿದ್ದರು. ವಿಶೇಷ ಅರಿವು ಅಭಿಯಾನ ಅಂಗವಾಗಿ ಪಟ್ಟಣದ ಸಂತೆ ಮಾರುಕಟ್ಟೆ, ಪೊಲೀಸ್ ಠಾಣೆ ಮುಂಭಾಗ, ಹಳೇಪೇಟೆ, ಹಳೇ ಮಂಡಗದ್ದೆ ಸರ್ಕಲ್ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜಿಸಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿರುವರಿಗೆ ದಂಡ ವಿಧಿಸಿ, ಹೆಲ್ಮೆಟ್ ಕೊಂಡು ಕೊಳ್ಳುವಂತೆ ಪ್ರೇರೇಪಿಸಲಾಯಿತು.

Share this article