ಕನ್ನಡಪ್ರಭ ವಾರ್ತೆ ಹಾವೇರಿ
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕಿಆಲೂರಿನ ಅಫ್ತಾಬ್ ಮಕ್ಬೂಲಅಹ್ಮದ್ ಚಂದನಕಟ್ಟಿ(24), ಮದರಸಾಬ್ ಮಹಮದ್ ಇಸಾಕ್ ಮಂಡಕ್ಕಿ ಅಕ್ಕಿಆಲೂರು (23), ಆಟೋ ಚಾಲಕ ಅಬ್ದುಲ್‌ಖಾದರ್ ಹಂಚಿನಮನಿ (28) ಹಾಗೂ ಸಮೀವುಲ್ಲಾ ಲಾಲನವರ ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ಮಹಮ್ಮದ್ ಸೈಫ್ ಅಬ್ದುಲ್‌ಸತ್ತಾರಸಾವಿಕೇರಿ ಅಕ್ಕಿಆಲೂರು ಎಂಬಾತ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿದ್ದಾನೆ. ಇನ್ನೂ ಕೆಲವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಒಂಟಿ ಜೋಡಿಯೇ ಟಾರ್ಗೆಟ್:ಗ್ಯಾಂಪ್ ರೇಪ್ ಆರೋಪಿಗಳು ಈ ಹಿಂದೆ ಕೂಡ ಇಂಥದ್ದೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಗ್ಯಾಂಗ್ ರೇಪ್ ಪ್ರಕರಣ ಹೊರಬೀಳುತ್ತಿದ್ದಂತೆ ಮುಸ್ಲಿಂ ಯುವತಿಯೊಬ್ಬಳನ್ನು ಕಾರಿನಲ್ಲಿ ಕೂರಿಸಿಕೊಂಡು ಹಲ್ಲೆ ನಡೆಸಿರುವ ಇದೇ ಆರೋಪಿಗಳು ಎನ್ನಲಾಗಿರುವ ವಿಡಿಯೋ ವೈರಲ್ ಆಗಿದೆ. ಮುಸ್ಲಿಂ ಕೋಮಿಗೆ ಸೇರಿದ ಯುವತಿ ಅನ್ಯ ಕೋಮಿನವರೊಂದಿಗೆ ಕಾಣಸಿಕೊಂಡರೆ ಅಂಥವರನ್ನೇ ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ವೈರಲ್ ಆಗಿರುವ ವಿಡಿಯೋ ಪುಷ್ಠಿ ನೀಡುತ್ತಿದೆ.
ಸಂಘಟನೆಗಳ ಬೆಂಬಲವಿತ್ತೇ?:
ಗ್ಯಾಂಗ್ ರೇಪ್ ಪ್ರಕರಣವನ್ನು ಕೂಡ ಮೊದಲು ನೈತಿಕ ಪೊಲೀಸ್‌ಗಿರಿ ಎಂದೇ ಬಿಂಬಿಸುವ ಯತ್ನ ನಡೆದಿತ್ತು. ಆದರೆ, ಸಂತ್ರಸ್ತ ಮಹಿಳೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಮೇಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಅಲ್ಲದೇ ತನ್ನ ಮೇಲೆ 7 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯೇ ಹೇಳಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದಕ್ಕೂ ಮೊದಲು ಆಕೆಯ ಮೇಲೆ ಕೇಸ್ ದಾಖಲಿಸದಂತೆ ಒತ್ತಡ ಬಂದಿತ್ತು ಎಂಬ ಆಘಾತಕಾರಿ ಸಂಗತಿಯನ್ನು ಸಂತ್ರಸ್ತೆಯೇ ಹೊರಹಾಕಿದ್ದಾಳೆ. ಅತ್ಯಾಚಾರ ಕೇಸ್ ದಾಖಲಿಸದಂತೆ ಅಕ್ಕಿಆಲೂರಿನ ಅನೇಕರು ಬಂದು ಒತ್ತಡ ಹೇರಿದರು. ಬೇಕಾದಷ್ಟು ಹಣ ಕೊಡುತ್ತೇವೆ ಎಂದರು. ಆದರೆ, ಮಾನ ಮರ್ಯಾದೆಯೇ ಹೋದ ಮೇಲೆ ಇವರು ಕೊಡುವ ಹಣ ಯಾರಿಗೆ ಬೇಕು? ನನಗೆ ಎರಡು ವರ್ಷದ ಮಗಳಿದ್ದಾಳೆ. ನನಗೆ ರಕ್ಷಣೆ ಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆ ಒತ್ತಾಯಿಸಿದ್ದಾಳೆ.
ಹಾನಗಲ್ಲ ಪಟ್ಟಣದಿಂದ 8 ಕಿಲೋ ಮೀಟರ್ ದೂರದ ಶಿರಗೋಡ ಅರಣ್ಯ ಪ್ರದೇಶದಲ್ಲಿ ಗ್ಯಾಂಗ್ ರೇಪ್ ಎಸಗಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ಘಟನಾ ಸ್ಥಳದಲ್ಲಿ ಮಹಿಳೆಯ ಒಳ ಉಡುಪು ಪತ್ತೆಯಾಗಿದೆ ಎನ್ನಲಾಗಿದೆ. ದಾವಣಗೆರೆಯ ಎಫ್‌ಎಸ್‌ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಜ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಶನಿವಾರ ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜನ್ ಹಾನಗಲ್ಲ ಠಾಣೆಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದು ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.