ದಕ್ಷತೆ, ಸರಳತೆಗೆ ಬೈಕೆರೆ ಹೊಸ ಭಾಷ್ಯ: ಶಾಸಕ ಸಿಮೆಂಟ್‌ ಮಂಜು

KannadaprabhaNewsNetwork | Published : Feb 2, 2024 1:07 AM

ಸಾರಾಂಶ

ದಕ್ಷತೆ ಹಾಗೂ ಸರಳತೆಗೆ ಹೊಸ ಭಾಷ್ಯ ಬರೆದವರು ಬೈಕೆರೆ ನಾಗೇಶ್ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಮಲೆನಾಡು ವೀರಶೈವ ಸಮಾಜದ ನೇತೃತ್ವದಲ್ಲಿ ವಿವಿಧ ಸಮಾಜದವರು ಹಮ್ಮಿಕೊಂಡಿದ್ದ ಬೈಕೆರೆ ನಾಗೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೈಕೆರೆ ನಾಗೇಶ್‌ ಸ್ಮರಣೆ ವೇಳೆ ಅಭಿಪ್ರಾಯ । ವೀರಶೈವ ಸಮಾಜ ಆಯೋಜನೆ

ಕನ್ನಡಪ್ರಭ ವಾರ್ತೆ ಸಕಲೇಶಪುರ

ದಕ್ಷತೆ ಹಾಗೂ ಸರಳತೆಗೆ ಹೊಸ ಭಾಷ್ಯ ಬರೆದವರು ಬೈಕೆರೆ ನಾಗೇಶ್ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಗುರುವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಮಲೆನಾಡು ವೀರಶೈವ ಸಮಾಜದ ನೇತೃತ್ವದಲ್ಲಿ ವಿವಿಧ ಸಮಾಜದವರು ಹಮ್ಮಿಕೊಂಡಿದ್ದ ಬೈಕೆರೆ ನಾಗೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೂರು ದಶಕಗಳ ಕಾಲ ದೆಹಲಿ ಹಾಗೂ ಕರ್ನಾಟಕದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದ್ದ ಇವರ ದಕ್ಷತೆಯನ್ನು ಮೆಚ್ಚಿ ನಿವೃತ್ತಿಯ ನಂತರವೂ ಕರ್ನಾಟಕ ಸರ್ಕಾರ ಹಲವು ಪ್ರಮುಖ ಜವಾಬ್ದಾರಿಗಳನ್ನು ನೀಡಿತ್ತು. ಇಂತಹ ವ್ಯಕ್ತಿಗಳು ಹುಟ್ಟಿಬರುವುದು ಅಪರೂಪ. ಸಂಕಷ್ಟ ಕಾಲದಲ್ಲಿ ಕಾಫಿ ಬೆಳೆಗಾರರನ್ನು ಕೈಹಿಡಿದು ನಡೆಸಿದವರು ಬೈಕೆರೆ ನಾಗೇಶ್ ಎಂದು ಹೇಳಿದರು.

ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಬೈಕೆರೆ ನಾಗೇಶ್ ಒಬ್ಬ ವ್ಯಕ್ತಿಯಲ್ಲ, ಅವರು ಶಕ್ತಿಯಾಗಿದ್ದರು. ಗೌಪ್ಯವಾಗಿದ್ದ ಕೇಂದ್ರದ ಯೋಜನೆಗಳನ್ನು ಕರ್ನಾಟಕಕ್ಕೆ ತಂದ ಕೀರ್ತಿ ಬೈಕೆರೆ ನಾಗೇಶ್ ಅವರಿಗೆ ಸಲ್ಲುತ್ತದೆ. ಒಬ್ಬ ಮಂತ್ರಿ ಮಾಡಬಹುದಾದ ಅಭಿವೃದ್ಧಿ ಕೆಲಸಗಳನ್ನು ತಮ್ಮ ತವರಿಗೆ ಮಾಡಿದ್ದಾರೆ. ದೆಹಲಿಯಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ ಇವರ ಸಹಾಯ ಪಡೆಯದ ರಾಜಕಾರಣಿಗಳೇ ಇಲ್ಲ ಎಂದರು.

ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಕೆಲವರಿಗೆ ಹುಟ್ಟಿರುತ್ತದೆ, ಸಾವು ಇರುವುದಿಲ್ಲ. ಇಂತಹ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರಿದವರು ಬೈಕೆರೆ ನಾಗೇಶ್. ಇಂತಹ ಮಹಾನ್ ವ್ಯಕ್ತಿ ಮತ್ತೊಮ್ಮೆ ಹುಟ್ಟಿಬರಲಿ ಎಂದರು.

ಮಾಜಿ ಶಾಸಕ ಬಿ.ಆರ್ ಗುರುದೇವ್, ರಾಜ್ಯ ಹೈಕೋರ್ಟ್ ವಕೀಲ ದೊಡ್ಡೇಗೌಡ ಮಾತನಾಡಿದರು. ಮುಖಂಡರಾದ ಬಿ.ಎ. ಜಗನ್ನಾಥ್, ಆನೇಮಹಲ್ ಬಸವಣ್ಣ, ದಿವಾನ್, ಬೈಕೆರೆ ನಾಗೇಶ್ ಪತ್ನಿ ಸುಗುಣ ನಾಗೇಶ್, ಪುತ್ರಿ ಅರ್ಪಿತಾ ಇದ್ದರು.ಬೈಕೆರೆ ನಾಗೇಶ್ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಬಿ.ಆರ್ ಗುರುದೇವ್, ಎಚ್.ಎಂ ವಿಶ್ವನಾಥ್, ಎಚ್.ಕೆ ಕುಮಾರಸ್ವಾಮಿ ಇದ್ದರು.

Share this article