ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ನಗರಕ್ಕೆ ಮಂಗಳವಾರ ಸಿಐಡಿ ಪೊಲೀಸರು ಕರೆತಂದಿದ್ದಾರೆ.ಶಿವನ ಹತ್ಯೆ ಬಳಿಕ ಬಂಧನ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಜಗ್ಗ ಮಂಗಳವಾರ ನಸುಕಿನಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಸಿಐಡಿ ಕೇಂದ್ರ ಕಚೇರಿಗೆ ಕರೆತಂದು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಜು.15ರಂದು ಹಲಸೂರು ಕೆರೆ ಸಮೀಪ ತನ್ನ ಮನೆ ಬಳಿ ನಿಂತಿದ್ದ ರೌಡಿ ಬಿಕ್ಲು ಶಿವನ ಮೇಲೆ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಆಪ್ತ ಹೆಣ್ಣೂರು ಜಗದೀಶ್‌ನ ಸಹಚರರು ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದರು. ಈ ಕೃತ್ಯ ಬಳಿಕ ದುಬೈಗೆ ಹಾರಿದ್ದ ಜಗ್ಗ ಇಂಡೋನೆಷಿಯಾಕ್ಕೆ ತೆರಳಿ ಅಲ್ಲಿಂದ ಶ್ರೀಲಂಕಾಕ್ಕೆ ಪರಾರಿಯಾಗಿದ್ದ. ಜಗ್ಗನ ಪತ್ತೆಗೆ ಸಿಐಡಿ ಪೊಲೀಸರು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು. ಒಂದೂವರೆ ತಿಂಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಜಗ್ಗ ಕೊನೆಗೆ ಭಾರತಕ್ಕೆ ಮರಳಿದ ಕೂಡಲೇ ಬಂಧನವಾಗಿದೆ. ಶ್ರೀಲಂಕಾದಲ್ಲಿ ಎರಡ್ಮೂರು ದಿನ ವಾಸ್ತವ್ಯ ಹೂಡಿ ದೆಹಲಿ ವಿಮಾನ ನಿಲ್ದಾಣಕ್ಕೆ ನಸುಕಿನಲ್ಲಿ ಜಗ್ಗ ಬರುವ ಮಾಹಿತಿಯನ್ನು ಸಿಐಡಿ ಕಲೆ ಹಾಕಿತು. ಕೂಡಲೇ ದೆಹಲಿಗೆ ತೆರಳಿದ ಅಧಿಕಾರಿಗಳು, ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳ ನೆರವು ಪಡೆದು ಜಗ್ಗನನ್ನು ಬಂಧಿಸಿ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.ಜಮೀನು ವಿಚಾರವಾಗಿ ಕೊಲೆ:
ಕೆ.ಆರ್.ಪುರದ ಸಮೀಪದ ಕಿತ್ತಗನೂರಿನ ಜಮೀನು ವಿಚಾರವಾಗಿ ರೌಡಿ ಬಿಕ್ಲು ಶಿವ ಹಾಗೂ ಜಗ್ಗನ ಮಧ್ಯೆ ವಿವಾದವಾಗಿತ್ತು. ಇದೇ ದ್ವೇಷದ ಹಿನ್ನೆಲೆ ಬಿಕ್ಲು ಶಿವನ ಹತ್ಯೆಗೆ ಜಗ್ಗ ನಿರ್ಧರಿಸಿದ್ದ. ಅಂತೆ ಜು.15 ರಂದು ರಾತ್ರಿ ತನ್ನ ಸಹಚರರ ಮೂಲಕ ಸಂಚನ್ನು ಹೊರ ರಾಜ್ಯದಲ್ಲಿ ಕುಳಿತೇ ಜಗ್ಗ ಕಾರ್ಯರೂಪಕ್ಕಿಳಿಸಿದ್ದ. ಈ ಹತ್ಯೆಗೆ ನೆರವು ನೀಡಿದ ಆರೋಪದ ಮೇರೆಗೆ ಶಾಸಕ ಬೈರತಿ ಬಸವರಾಜು ಅವರಿಗೆ ಪೊಲೀಸರ ತನಿಖೆ ಬಿಸಿ ತಟ್ಟಿದೆ. ತನಗೆ ಜಗ್ಗನ ಪರಿಚಯವೇ ಇಲ್ಲ ಎಂದು ಪೊಲೀಸರಿಗೆ ಶಾಸಕರು ಹೇಳಿಕೆ ಕೊಟ್ಟಿದ್ದರು. ಆದರೆ ಶಾಸಕರ ಜತೆ ಜಗ್ಗನ ಆತ್ಮೀಯ ಒಡನಾಟದ ಪೋಟೋಗಳು ಬಹಿರಂಗವಾಗಿದ್ದವು. ಅಂತಿಮವಾಗಿ ವಿದೇಶದಲ್ಲಿದ್ದ ಜಗ್ಗನ ಬಂಧನವಾಗಿದ್ದು, ಪ್ರಕರಣದಲ್ಲಿ ಮಹತ್ವದ ಬೆಳವಣೆಯಾಗಿದೆ.