ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ‘ತಲೆಬರುಡೆ’ ಸುಳ್ಳಿನ ಸಂಕಥನ ಬಹಿರಂಗವಾದ ಬೆನ್ನಲ್ಲೇ ದಶಕಗಳ ಹಿಂದೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ಹತ್ಯೆ ಹಾಗೂ ನಾಪತ್ತೆ ಪ್ರಕರಣಗಳ ಕುರಿತು ಮರು ತನಿಖೆ ವಿಚಾರದಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ರಾಜ್ಯ ಸರ್ಕಾರ ರೆಡ್ ಸಿಗ್ನಲ್ ತೋರಿಸಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ತಲೆಬರುಡೆ ಪುರಾಣದ ತನಿಖೆ ಶೀಘ್ರ ಮುಕ್ತಾಯಗೊಳಿಸುವಂತೆ ಎಸ್ಐಟಿಗೆ ಸ್ಪಷ್ಟವಾಗಿ ಸೂಚಿಸಿರುವ ಸರ್ಕಾರ, ಧರ್ಮಸ್ಥಳ ಪ್ರಕರಣದ ದೂರುದಾರನ ಹಿಂದೆ ದೊಡ್ಡ ಸಂಚು ಇದ್ದರೆ ಆ ಕುರಿತ ತನಿಖೆಯನ್ನು ಎಸ್‌ಐಟಿ ಬದಲು ರಾಜ್ಯ ಅಪರಾಧ ತನಿಖಾ ಇಲಾಖೆ(ಸಿಐಡಿ)ಗೆ ಒಪ್ಪಿಸುವ ಕುರಿತು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಸೂಚನೆ:
ಎಸ್‌ಐಟಿ ತನಿಖೆ ಮುಕ್ತಾಯಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಮಟ್ಟದಲ್ಲಿ ಒಂದು ಸುತ್ತಿನ ಸಮಾಲೋಚನೆ ಕೂಡ ನಡೆದಿದೆ. ಅಲ್ಲದೆ, ಮೂರು ದಿನಗಳ ಹಿಂದೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರೊಂದಿಗೆ ಒನ್-ಟು-ಒನ್ ಸಭೆ ನಡೆಸಿ ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತ ಮೃತದೇಹ ಹೂತ ಪ್ರಕರಣದ ತನಿಖಾ ಪ್ರಗತಿ ಹಾಗೂ ಅಲ್ಲಿನ ಬೆಳವಣಿಗೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಕೊನೆಗೆ ತ್ವರಿತವಾಗಿ ತನಿಖೆಗೆ ಇತಿಶ್ರೀ ಹಾಡುವಂತೆ ಎಸ್‌ಐಟಿಗೆ ಪರೋಕ್ಷವಾಗಿ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ತನಿಖೆಗೆ ಸರ್ಕಾರದ ಅನುಮತಿ ಬೇಕು:
ಧರ್ಮಸ್ಥಳ ಸುತ್ತಮುತ್ತ ತಾನು ನೂರಾರು ಮೃತದೇಹಗಳನ್ನು ಅನಧಿಕೃತವಾಗಿ ಹೂತಿರುವುದಾಗಿ ಕೆಲ ತಿಂಗಳ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಿ ಚಿನ್ನಯ್ಯ ಹೇಳಿಕೆ ಕೊಟ್ಟಿದ್ದ. ಅಲ್ಲದೆ, ತನ್ನ ಆರೋಪಕ್ಕೆ ತಲೆಬರುಡೆ ಹಾಗೂ ಮೂಳೆಗಳನ್ನು ಸಾಕ್ಷಿಯಾಗಿ ಆತ ತಂದುಕೊಟ್ಟಿದ್ದ. ಈತನ ಹೇಳಿಕೆ ಹಾಗೂ ರಾಜ್ಯ ಮಹಿಳಾ ಆಯೋಗದ ಪತ್ರ ಆಧರಿಸಿ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ಕುರಿತು ತನಿಖೆಗೆ ಎಸ್‌ಐಟಿ ರಚಿಸಿ ಸರ್ಕಾರ ಆದೇಶಿಸಿತ್ತು. ಆದರೆ ಈಗಾಗಲೇ ನ್ಯಾಯಾಲಯಕ್ಕೆ ಮುಕ್ತಾಯದ ವರದಿ ಸಲ್ಲಿಸಿರುವ ಕೆಲ ವಿವಾದಾತ್ಮಕ ಹತ್ಯೆ ಪ್ರಕರಣಗಳ ತನಿಖೆ ಬಗ್ಗೆ ಆದೇಶದಲ್ಲಿ ಸರ್ಕಾರ ಉಲ್ಲೇಖಿಸಿರಲಿಲ್ಲ. ಹೀಗಾಗಿ ಹಳೇ ಪ್ರಕರಣಗಳ ಮರು ತನಿಖೆಯಾಗಬೇಕಾದರೆ ಡಿಜಿಪಿ ಅವರು ಆದೇಶಿಸಬೇಕು. ಇದಕ್ಕೆ ಸರ್ಕಾರದ ಪೂರ್ವಾನುಮತಿ ಸಹ ಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಹೀಗಾಗಿ ಅನನ್ಯಾ ಭಟ್ ನಾಪತ್ತೆ ಪ್ರಕರಣ ಹೊರತುಪಡಿಸಿ ಪದ್ಮಲತಾ, ಮಾವುತ ನಾರಾಯಣ, ಯಮುನಾ ಹೀಗೆ ಇತರೆ ನಿಗೂಢ ಹತ್ಯೆ ಪ್ರಕರಣಗಳ ಬಗ್ಗೆ ಮರು ತನಿಖೆಗೆ ಸರ್ಕಾರ ಸಮ್ಮತಿಸಿಲ್ಲ. ಇತ್ತೀಚಿನ ಧರ್ಮಸ್ಥಳದ ಅನಧಿಕೃತ ಮೃತದೇಹಗಳ ಪ್ರಕರಣದಷ್ಟೇ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕೂಡ ಸಾಕಷ್ಟು ಸದ್ದು ಮಾಡಿತ್ತು. ಈ ಕಾರಣಕ್ಕೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಸರ್ಕಾರ ವಹಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಸ್‌ಐಟಿ ಮುಕ್ತಾಯ ಚಿಂತನೆಗೆ ಕಾರಣಗಳೇನು?
1.ಧರ್ಮಸ್ಥಳ ಅನಧಿಕೃತ ಮೃತದೇಹಗಳ ಪ್ರಕರಣದ ಕುರಿತು ಈವರೆಗೆ ತನಿಖೆಯಲ್ಲಿ ಯಾವುದೇ ಪುರಾವೆ ಸಿಕ್ಕಿಲ್ಲ. ದೂರುದಾರನ ಮಾಹಿತಿ ಆಧರಿಸಿ ಧರ್ಮಸ್ಥಳ ಸುತ್ತಮುತ್ತ ಭೂಮಿ ಅಗೆದರೂ ಮೃತದೇಹಗಳು ಸಿಕ್ಕಿಲ್ಲ. ಕೊನೆಗೆ ದೂರುದಾರನೇ ಸುಳ್ಳು ಹೇಳಿರುವ ಸಂಗತಿ ತನಿಖೆಯಲ್ಲಿ ಬಯಲಾಯಿತು.
2.ಧರ್ಮಸ್ಥಳ ಪ್ರಕರಣವು ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಯಿತು. ಸರ್ಕಾರದ ವಿರುದ್ಧ ಸಮರಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಂತಾಯಿತು. ಇದಕ್ಕೆ ಪ್ರತಿರೋಧವಾಗಿ ಆಡಳಿತ ಪಕ್ಷ ಮಾತನಾಡಿದರೂ ಅದೂ ನಿರೀಕ್ಷಿತ ಮಟ್ಟಕ್ಕೆ ಪ್ರಭಾವ ಬೀರದೆ ಹೋಗಿದ್ದು, ಸರ್ಕಾರಕ್ಕೆ ತಲೆಬಿಸಿ ತಂದಿದೆ ಎನ್ನಲಾಗಿದೆ.
3.ಧರ್ಮಸ್ಥಳದಲ್ಲಿ ಮತ್ತೆ ಮೃತದೇಹಗಳಿಗೆ ಹುಡುಕಾಟ ನಡೆಸಿದರೆ ಅಥವಾ ಹಳೇ ಪ್ರಕರಣಗಳ ಮರು ತನಿಖೆಗೆ ಆದೇಶಿಸಿದರೆ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಕುರಿತು ಮತ್ತಷ್ಟು ನಕಾರಾತ್ಮಕ ಅಭಿಪ್ರಾಯ ಮೂಡಬಹುದು ಎಂಬ ಆಂತಕ ಎದುರಾಗಿದೆ.
4. ದೂರುದಾರ ಚಿನ್ನಯ್ಯನ ಹಿಂದೆ ಸಂಚಿನ ಜಾಲ ವಿಸ್ತಾರವಾಗಿದ್ದರೆ ತನಿಖೆ ಸುದೀರ್ಘಾವಧಿ ತೆಗೆದುಕೊಳ್ಳುತ್ತದೆ. ಹೀಗಾಗಿ ಸಂಚಿನ ಬಗ್ಗೆ ತನಿಖೆಗೆ ಎಸ್‌ಐಟಿ ರದ್ದುಪಡಿಸಿ ಸಿಐಡಿಗೆ ವಹಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯ ಸರ್ಕಾರ ಮಟ್ಟದಲ್ಲಿ ವ್ಯಕ್ತವಾಗಿದೆ.
5.ಅನಧಿಕೃತ ಮೃತದೇಹ ಹೂತ ಪ್ರಕರಣಕ್ಕೆ ಮಾತ್ರ ಎಸ್‌ಐಟಿ ರಚಿಸಲಾಗಿತ್ತು ಎಂಬ ಕಾರಣ ಮುಂದಿಟ್ಟು ಜನರ ಸಮುದಾಯದ ಒಲವು ಪಡೆಯುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಸರ್ಕಾರ ಹೊರಟಿದೆ ಎನ್ನಲಾಗಿದೆ.