ಬರ ಪರಿಹಾರ ವಿತರಣೆಯಲ್ಲಿ ಇಬ್ಬಗೆಯ ನೀತಿ

KannadaprabhaNewsNetwork | Published : May 17, 2024 12:36 AM

ಸಾರಾಂಶ

ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾದ ರೈತರಿಗೆ ಬಿಡುಗಡೆ ಮಾಡಿರುವ ಪರಿಹಾರದ ಹಣ. ನಷ್ಟ ಪರಿಹಾರದ ಮಾರ್ಗಸೂಚಿ, ಸಮೀಕ್ಷೆ ನ್ಯಾಯ ಸಮ್ಮತವಾಗಿಲ್ಲ. ಎಲ್ಲಾ ರೈತರಿಗೂ ಪರಿಹಾರ ವಿತರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ರಾಜ್ಯ ರೈತ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾದ ರೈತರಿಗೆ ಬಿಡುಗಡೆ ಮಾಡಿರುವ ಪರಿಹಾರದ ಹಣ. ನಷ್ಟ ಪರಿಹಾರದ ಮಾರ್ಗಸೂಚಿ, ಸಮೀಕ್ಷೆ ನ್ಯಾಯ ಸಮ್ಮತವಾಗಿಲ್ಲ. ಎಲ್ಲಾ ರೈತರಿಗೂ ಪರಿಹಾರ ವಿತರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ರಾಜ್ಯ ರೈತ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.ನಗರದ ಮಹಾಮನೆಯಲ್ಲಿ ನಡೆದ ಜಿಲ್ಲಾ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮಾತನಾಡಿ, 70 ಲಕ್ಷ ರೈತರ ಪೈಕಿ ೨೭ ಲಕ್ಷ ರೈತರಿಗೆ ನಷ್ಟ ಪರಿಹಾರ ನೀಡಲಾಗಿದೆ. ೫೦೦-೧೦೦೦ ರು. ಮಾತ್ರ ಎಂಟು ತಿಂಗಳ ನಂತರ ಭಿಕ್ಷಾ ರೂಪದಲ್ಲಿ ಪರಿಹಾರ ವಿತರಿಸಲಾಗಿದೆ ಎಂದರು. ಬರಗಾಲಕ್ಕೆ ತುತ್ತಾದ ೨೨೩ ತಾಲೂಕಿನ ಹಳ್ಳಿಗಳಲ್ಲಿ ಕೆಲವೇ ಕೆಲವು ರೈತರಿಗೆ ರಾಗಿ, ಜೋಳ, ಮೆಕ್ಕೆಜೋಳ ಬೆಳೆಗಳಿಗೆ ಬೆಳೆ ನಷ್ಟ ಎಂದು ಹಣ ಬಿಡುಗಡೆಯಾಗಿದೆ. ಮಾರ್ಗಸೂಚಿ ಬದಲಾಯಿಸಿ ಮರು ಪರಿಶೀಲನೆ ನಡೆಸಲಿ ಸಂಕಷ್ಟದಲ್ಲಿರುವ ಎಲ್ಲ ರೈತರಿಗೂ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.

ಬರಗಾಲಕ್ಕೆ ತುತ್ತಾಗಿ ನೀರಿಲ್ಲದೆ ಕಬ್ಬು ಬೆಳೆ ರಾಜ್ಯದಲ್ಲಿ ಶೇ. ೩೦ರಷ್ಟು ಒಣಗಿ ಹೋಗಿದೆ. ಭತ್ತ, ತೆಂಗು ಸಹ ನೀರಿಲ್ಲದೆ ಒಣಗಿ ಹೋಗಿದೆ. ಈ ಬೆಳೆಗಳಿಗೆ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಸುಮಾರು ೧೫ ಲಕ್ಷ ಕೃಷಿ ಪಂಪ್ಸೆಟ್ಟುಗಳ ನೀರು ಬತ್ತಿ ಹೋದ ಕಾರಣ ಆ ರೈತರ ಬೆಳೆಗಳು ಒಣಗಿ ನಾಶವಾಗಿ ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ. ಇಂತಹ ಎಲ್ಲಾ ರೈತರಿಗೂ ಸೂಕ್ತ ನಷ್ಟ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಈಗ ಬಿದ್ದ ಭಾರಿ ಮಳೆ ಬಿರುಗಾಳಿಗೆ ತುತ್ತಾಗಿ ಬಾಳೆ, ಮಾವು, ತರಕಾರಿ ಇನ್ನಿತರ ಬೆಳೆಗಳು ನಾಶವಾಗಿವೆ. ರೈತರು ಲಕ್ಷಾಂತರ ರು. ನಷ್ಟ ಹೊಂದಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ರೈತನಿಗೆ ಮತ್ತೊಂದು ಹೊಡೆತ ಬಿದ್ದಿದೆ. ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ವಿಪತ್ತು ನಿರ್ವಹಣಾ ಪರಿಹಾರ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು ಹಾಗೂ ಈ ರೈತರು ಮಾಡಿರುವ ಬೆಳೆ ಸಾಲವನ್ನು ಬೆಳೆ ವಿಮಾ ಪಾಲಿಸಿಯಲ್ಲಿ ಸಂಪೂರ್ಣ ಮನ್ನಾ ಮಾಡಲು ಸರ್ಕಾರಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ ಮಾತನಾಡಿ, ೨೦೨೩ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಕಬ್ಬಿನ ಹೆಚ್ಚುವರಿ ದರ ಪ್ರತಿ ಟನ್‌ಗೆ ೧೫೦ ರು. ಮಾದೇಶ್ವರ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಪಾವತಿ ಆಗಿಲ್ಲ. ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆಯಾಗಿಲ್ಲ. ಕೂಡಲೇ ಹಣ ಕೊಡಿಸಲು ಸೂಕ್ತ ಹೋರಾಟ ಹಮ್ಮಿಕೊಳ್ಳಬೇಕು ಎಂದರು. ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ ಮಾತನಾಡಿ, ಮಳೆ ಗಾಳಿಯಿಂದ ಬಾಳೆ ಬೆಳೆ ನಷ್ಟವಾಗಿರುವ ರೈತರಿಗೆ ಸಂಪೂರ್ಣ ನಷ್ಟ ಪರಿಹಾರ ನೀಡಲು ಜಿಲ್ಲಾ ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ನಂಜದೇವನಪುರ ಸತೀಶ್, ಷಡಕ್ಷರಿ, ಯರಿಯೂರಮಹೇಶ್, ಶಿವಸ್ವಾಮಿ, ಕಿರಗಸೂರಶಂಕರ್, ಬರಡನಪುರ ನಾಗರಾಜ್, ಇತರರು ಇದ್ದರು.

Share this article