ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಥೋತ್ಸವದಲ್ಲಿ ಲೋಪಬರದಂತೆ ಕ್ರಮವಹಿಸಿ:
ರಥೋತ್ಸವ ಅಂಗವಾಗಿ ದೇವಾಲಯದ ಆವರಣ, ರಥದ ಬೀದಿ, ಕಲ್ಯಾಣಿ ಕೊಳದ ಬಳಿ, ಕಮರಿ ಅವರಣ ಹಾಗೂ ದಾಸೋಹ ಆವರಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮತ್ತಿತ್ತರ ಜನನಿಬಿಡ ಸ್ಥಳಗಳಲ್ಲಿ ವಹಿಸಲಾಗುವ ಬಂದೋಬಸ್ತ್ ಕ್ರಮಗಳು ಸಮರ್ಪಕವಾಗಿರಬೇಕು. ರಥೋತ್ಸವ ಸಿದ್ಧತೆಗಳ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ತಿಳಿಸಿದರು.ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಾರ್ಕಿಂಗ್ ಸ್ಥಳ ಸೇರಿದಂತೆ ಇತರೆಡೆ ರಾಜಕೀಯ ಪ್ರೇರಿತವಾದ ಯಾವುದೇ ಬ್ಯಾನರ್, ಭಿತ್ತಿಪತ್ರಗಳ ಅಳವಡಿಕೆಗೆ ಅವಕಾಶ ನೀಡಬಾರದು. ಪ್ರವಾಸಿ ಮಂದಿರದಲ್ಲಿಯೂ ಸಹ ಯಾವುದೇ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ರಥೋತ್ಸವ ಸಂದರ್ಭದಲ್ಲಿ ಭಕ್ತಾಧಿಗಳಿಗೆ ವಿತರಿಸುವ ಪಾನಕ, ಪ್ರಸಾದ ಹಂಚಿಕೆ ಹಾಗೂ ಅರವಟ್ಟಿಗೆ ವಿತರಣೆಗೆ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಂದ ಲಿಖಿತ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ, (ಮೊ. ಸಂಖ್ಯೆ: 8884504666) ಕೊಳ್ಳೇಗಾಲ ಮತ್ತು ಇ-ಮೇಲ್ ackollegala@gmail.com ಇವರನ್ನು ಸಂಪರ್ಕಿಸಬಹುದು ಎಂದರು.
ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಏ. 21ರಿಂದ 25ರವರೆಗೆ ಭಕ್ತಾಧಿಗಳು ಕ್ಷೇತ್ರಕ್ಕೆ ಹೋಗಿಬರಲು ಹೆಚ್ಚು ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯೋಜನೆ ಮಾಡಬೇಕು. ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸ್ವಚ್ಚತಾ ಕಾರ್ಯಗಳಿಗೆ ವಿಶೇಷ ಗಮನ ಹರಿಸಬೇಕು. ಹಳ್ಳಗಳಿಂದ ಕೂಡಿದ ರಸ್ತೆಗಳನ್ನು ಗ್ರಾವೆಲ್ ತುಂಬಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಯಾವುದೇ ಪ್ಲಾಸ್ಟಿಕ್ ಉಪಯೋಗಕ್ಕೆ ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಪ್ರಸ್ತುತ ಬೇಸಿಗೆ ಬಿಸಿಲು ಅಧಿಕವಾಗಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಕುಡಿಯುವ ನೀರಿನ ಪರಿಶುದ್ಧತೆ ತಪಾಸಣೆ ಕೈಗೊಂಡು ಜಾತ್ರೆಗೆ ಒಂದು ದಿನ ಮೊದಲೆ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಬೇಕು. ಲಭ್ಯವಿರುವ ಬೋರ್‌ವೆಲ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಭಕ್ತಾಧಿಗಳಿಗೆ ವಿತರಿಸುವ ಮಜ್ಜಿಗೆ ಮತ್ತು ಪಾನಕಕ್ಕೆ ಶುದ್ಧ ನೀರು ಬಳಸುವಂತೆ ತಿಳಿಹೇಳಬೇಕು ಎಂದು ತಿಳಿಸಿದರು.ಆರೋಗ್ಯ ಇಲಾಖೆ ವತಿಯಿಂದ ಏ. 21ರಿಂದ 25ರವರೆಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ವೈದ್ಯರು ಸಿಬ್ಬಂದಿ ತುರ್ತು ವಾಹನ ನಿಯೋಜಿಸಬೇಕು. ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಿರುವುದರಿಂದ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಮಾಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಥೋತ್ಸವದಂದು ದ್ವಿಚಕ್ರ ವಾಹನವನ್ನು ಬಿಳಿಗಿರಿರಂಗನ ಬೆಟ್ಟಕ್ಕೆ ನಿಷೇಧಿಸಬೇಕು. ದ್ವಿಚಕ್ರ ವಾಹನ ಸವಾರರು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಅಲ್ಲಿಂದ ಕೆಎಸ್.ಆರ್. ಟಿಸಿ ಬಸ್ಸುಗಳಲ್ಲಿ ಬೆಟ್ಟಕ್ಕೆ ತೆರಳುವಂತೆ ತಿಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಎಡಿಸಿ ಗೀತಾ ಹುಡೇದ, ಎಎಸ್ಪಿ ಉದೇಶ, ಎಸಿ ಶಿವಮೂರ್ತಿ, ತಹಶೀಲ್ದಾರ್ ನಿಸರ್ಗಪ್ರಿಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರ, ಆರ್‌ಟಿಒ ಗಾಯತ್ರಿ, ವಲಯ ಅರಣ್ಯ ಅಧಿಕಾರಿ ನಾಗೇಂದ್ರ ನಾಯಕ್, ದೇವಾಲಯದ ಅರ್ಚಕ ರವಿಕುಮಾರ್, ದೇವಾಲಯದ ಇಒ ಮೋಹನ್ ಕುಮಾರ್, ಕೆಎಸ್‌ಆರ್‌ಟಿಸಿ ಅಗ್ನಿಶಾಮಕ ಇಲಾಖೆ ಆಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.