ನಷ್ಟದಲ್ಲಿರೋ ಕಂಪೆನಿಗಳಿಂದ ಬಿಜೆಪಿಗೆ ಕೋಟ್ಯಂತರ ಹಣ: ಗುಂಡೂರಾವ್‌ ಆರೋಪ

KannadaprabhaNewsNetwork |  
Published : Apr 05, 2024, 01:00 AM IST
11 | Kannada Prabha

ಸಾರಾಂಶ

ಕಾನೂನನ್ನು ಉಪಯೋಗಿಸಿ ಬಿಜೆಪಿ ಬಹುದೊಡ್ಡ ಲೂಟಿಯಲ್ಲಿ ತೊಡಗಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಲಾಭ ಸೊನ್ನೆ ಇರುವ, ನಷ್ಟದಲ್ಲಿರುವ ಕಂಪೆನಿಗಳಿಂದ ಕೋಟ್ಯಂತರ ರು. ಹಣವನ್ನು ಬಿಜೆಪಿ ಚುನಾವಣಾ ಬಾಂಡ್‌ ರೂಪದಲ್ಲಿ ಪಡೆದುಕೊಂಡಿದೆ. ಕಾನೂನನ್ನು ಉಪಯೋಗಿಸಿ ಬಿಜೆಪಿ ಬಹುದೊಡ್ಡ ಲೂಟಿಯಲ್ಲಿ ತೊಡಗಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂನ್ಯ ಲಾಭ ಅಥವಾ ನಷ್ಟದಲ್ಲಿರುವ 33 ಕಂಪೆನಿಗಳು ಬಿಜೆಪಿಗೆ 434.2 ಕೋಟಿ ರು.ಗಳನ್ನು ಚುನಾವಣಾ ಬಾಂಡ್‌ ಮೂಲಕ ನೀಡಿವೆ. ಅಲ್ಲದೆ, ಹಲವು ಕಂಪೆನಿಗಳು ಲಾಭಕ್ಕಿಂತ ಹೆಚ್ಚಿನ ಮೊತ್ತವನ್ನು ಅಂದರೆ 601 ಕೋಟಿ ರು.ನ್ನು ಬಿಜೆಪಿಗೆ ನೀಡಿವೆ. ಲಾಭವೇ ಇಲ್ಲದ್ದರೆ ಹಣ ಕೊಡೋದು ಹೇಗೆ? ಇಂಥ ಕಂಪೆನಿಗಳನ್ನು ಉಪಯೋಗಿ ಬಿಜೆಪಿ ಮನಿ ಲಾಂಡರಿಂಗ್‌ನಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಅಮಿತ್‌ ಶಾ ಮಹಾ ಸುಳ್ಳುಗಾರ:

ಸರಿಯಾದ ಸಮಯದಲ್ಲಿ ಕರ್ನಾಟಕ ವರದಿ ನೀಡದ ಕಾರಣಕ್ಕೆ ಬರ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದು ಅಮಿತ್‌ ಶಾ ಹೇಳಿದ್ದು ಮಹಾ ಸುಳ್ಳು. ಅಮಿತ್‌ ಶಾ ಮಹಾ ಸುಳ್ಳುಗಾರ. ಅವರ ಗೃಹ ಇಲಾಖೆ ಅಧೀನದಲ್ಲೇ ಬರುವ ನ್ಯಾಶನಲ್‌ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ಅಥಾರಿಟಿಯವರು 2023ರ ಅಕ್ಟೋಬರ್‌ನಲ್ಲಿ ಬರ ಘೋಷಣೆಯಲ್ಲಿ ಕರ್ನಾಟಕ ಮಾದರಿಯಾಗಿದೆ ಎಂದು ಹೇಳಿತ್ತು. ನಂತರ ಜನವರಿಯಲ್ಲಿ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೆ ಪತ್ರ ಬರೆದಿದೆ. ಈ ಕುರಿತ ಲಿಖಿತ ದಾಖಲೆಯೇ ಇದ್ದರೂ ಅಮಿತ್‌ ಶಾ ಸುಳ್ಳು ಹೇಳಿದ್ದಾರೆ. ಬರ ವಿಚಾರದ ಕುರಿತು ಕೇಂದ್ರಕ್ಕೆ ವರದಿ ಕಳುಹಿಸಿದ ಮೇಲೂ, ಸಿಎಂ ಭೇಟಿ ಮಾಡಿದರೂ ಕೂಡ ಸಭೆ ನಡೆಸಲು ಅಮಿತ್‌ ಶಾ ಸಮಯ ಕೊಟ್ಟಿರಲಿಲ್ಲ. ನಯಾ ಪೈಸೆ ಬರ ಪರಿಹಾರ ನೀಡದೆ ಈಗ ಬಂದು ಸುಳ್ಳು ಹೇಳಿದರೆ ಜನ ನಂಬ್ತಾರಾ ಎಂದು ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದರು.

ಕುಟುಂಬ ರಾಜಕಾರಣ:

ತಾವು ಕುಟುಂಬ ರಾಜಕಾರಣ ವಿರುದ್ಧ ಇರುವುದಾಗಿ ಮೋದಿ ಹೇಳುತ್ತಾರೆ. ಕರ್ನಾಟಕದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷರು ಯಾರು? ಕೇಂದ್ರದಲ್ಲಿ ರಾಜ್ಯದ ದೊಡ್ಡ ಬಿಜೆಪಿ ಮುಖಂಡರು ಯಾರು? ಶಿವಮೊಗ್ಗದಲ್ಲಿ ಯಾರಿಗೆ ಸೀಟ್‌ ಕೊಟ್ಟಿದ್ದೀರಿ? ಈ ಥರ ಸುಳ್ಳಿನ ಪ್ರಚಾರ ಮಾಡಿದರೆ ಜನ ನಂಬಲ್ಲ ಎಂದರು.

ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಶುಭೋದಯ ಆಳ್ವ, ಶಾಹುಲ್‌ ಹಮೀದ್‌, ನೀರಜ್‌ ಪಾಲ್‌, ಪ್ರವೀಣ್‌ ಚಂದ್ರ ಆಳ್ವ, ವಿನಯ ರಾಜ್‌, ಟಿ.ಕೆ. ಸುಧೀರ್‌, ಸುಹಾನ್‌ ಆಳ್ವ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!