ಅ.31 ರಿಂದ ನ.3ರವರೆಗೆ ನಡೆಯಲಿರುವ ಉತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇದೇ ಅ. 31 ರಿಂದ ನ. 3 ರವರೆಗೆ ನಡೆಯುವ ಬಿಂಡಿಗ ದೇವಿರಮ್ಮ ದೀಪೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೇವಿರಮ್ಮ ದೀಪೋತ್ಸವದ ಹಿನ್ನಲೆಯಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಪ್ರತಿ ವರ್ಷದಂತೆ ಅ. 30 ರಂದು ರಾತ್ರಿ ಬೆಟ್ಟ ಹತ್ತುವ ಭಕ್ತಾಧಿಗಳಿಗೆ ಸೈನ್ ಬೋರ್ಡ್‌ಗಳ ಮೂಲಕ ಕೆಲವು ಮಾರ್ಗಸೂಚಿ ನೀಡಿದ್ದು ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಮಳೆ ಇರುವುದರಿಂದ ಜಾಗರೂಕತೆಯಿಂದ ಭಕ್ತರು ಬೆಟ್ಟ ಏರುವುದು, ಅಗತ್ಯವಿದ್ದರೆ ಸ್ವಯಂ ಸೇವಕರ ಸಹಾಯ ಪಡೆದು ಸುರಕ್ಷತೆಯಿಂದ ಬೆಟ್ಟ ಹತ್ತ ಬೇಕು ಎಂದು ಹೇಳಿದರು.
ಬರುವ ಭಕ್ತರಿಗೆ ಕೆಎಸ್ಆರ್ ಟಿಸಿ ಬಸ್ಸುಗಳ ವ್ಯವಸ್ಥೆ, ರಕ್ಷಣೆ, ಆರೋಗ್ಯ ಸೇವೆ ಹಾಗೂ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಬರುವ ಭಕ್ತರಿಗೆ ಮೂರು ದಿನಗಳ ಕಾಲ ವ್ಯವಸ್ಥಾಪನಾ ಸಮಿತಿ ಪ್ರಸಾದ, ಕುಡಿಯುವ ನೀರು ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿ ಕೊಳ್ಳುವಂತೆ ಹಾಗೂ ಪ್ರತಿ ವರ್ಷದಂತೆ ಈ ಬಾರಿ ಭಕ್ತರು ಹೆಚ್ಚಾಗುವ ಸಾಧ್ಯತೆ ಇದ್ದು, ಜಾತ್ರೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ವ್ಯವಸ್ಥಿತವಾಗಿ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ದೇವಾಲಯಕ್ಕೆ ಬರುವ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಳನ್ನು (ಜಂಗಲ್) ತೆಗೆದು ಸ್ವಚ್ಛ ಮಾಡಬೇಕು. ಸುಗಮ ವಾಹನ ಸಂಚಾರ, ಪಾರ್ಕಿಂಗ್ ಮಾಡಲು ವ್ಯವಸ್ಥಾಪನಾ ಸಮಿತಿ ಹಾಗೂ ಬರುವ ಭಕ್ತರು ಪೊಲೀಸರೊಂದಿಗೆ ಸಹಕರಿಸಬೇಕು. ನಿಗಧಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು. ಅದಷ್ಟು ಬರುವ ಭಕ್ತರು ಚಿಕ್ಕಮಗಳೂರು ನಗರದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಂದು ದೇವರ ದರ್ಶನ ಮಾಡಬೇಕು ಎಂದು ಹೇಳಿದರು.ನಗರದ ಹಾಗೂ ದೇವಸ್ಥಾನ ಬಳಿ ನಿಗಧಿಪಡಿಸಿರುವ ಪಾರ್ಕಿಂಗ್ ಜಾಗದಲ್ಲೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಬೆಟ್ಟ ಏರುವ ಭಕ್ತರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೆಟ್ಟ ಏರುವುದು ಸೂಕ್ತ. ಮಳೆ ಹೆಚ್ಚಾಗಿರುವ ಕಾರಣ ಯಾವುದೇ ಅವಘಡಗಳಿಗೆ ಅಸ್ಪದ ಆಗದಂತೆ ಭಕ್ತರು ನಿಗಾವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ. ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಶೈಲೇಂದ್ರ, ತಹಸೀಲ್ದಾರ್ ಡಾ. ಸುಮಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಿಂಡಿಗ ದೇವಿರಮ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.20 ಕೆಸಿಕೆಎಂ 4ಬಿಂಡಿಗ ದೇವಿರಮ್ಮ ದೀಪೋತ್ಸವದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಎಸ್ಪಿ ಡಾ. ವಿಕ್ರಂ ಅಮಟೆ ಇದ್ದರು.