ಜೈವಿಕ ಇದ್ದಿಲು ಮಣ್ಣಿನ ಸೂಕ್ಷ್ಮಜೀವಿಗಳಿಗೆ ಜೀವರಕ್ಷಕ

KannadaprabhaNewsNetwork |  
Published : Jun 15, 2026, 02:30 AM IST
ಜೈವಿಕ ಇದ್ದಿಲು ಮಣ್ಣಿನ ಸೂಕ್ಷ್ಮಜೀವಿಗಳಿಗೆ ಜೀವರಕ್ಷಕವಾಗಿ ಕೆಲಸ ಮಾಡುವುದು : ಡಾ. ಆರ್. ಕೃಷ್ಣಮೂರ್ತಿ | Kannada Prabha

ಸಾರಾಂಶ

ರೈತರು ತಮ್ಮ ಹೊಲದಲ್ಲಿ ಸಿಗುವ ತೆಂಗಿನ ಸಿಪ್ಪೆ ಮತ್ತು ತೊಗಟೆ, ತೆಂಗಿನ ಗರಿ ದಿಂಡು, ಎಡೆಮಟ್ಟೆ, ಕುರಂಬಳೆ, ವಿವಿಧ ಮರಗಳ ರೆಂಬೆಗಳು ಮತ್ತು ಇತರೆ ಕೃಷಿ ತ್ಯಾಜ್ಯಗಳನ್ನು ಬಳಸಿ ಕಡಿಮೆ ಗಾಳಿಯಲ್ಲಿ ಅವುಗಳನ್ನು ಸುಟ್ಟು ತಯಾರು ಮಾಡುವುದೆ ಜೈವಿಕ ಇದ್ದಿಲು ಎಂದು ಮಣ್ಣು ವಿಜ್ಞಾನಿ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮುಖ್ಯಸ್ಥರಾದ ಡಾ. ಆರ್. ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ರೈತರು ತಮ್ಮ ಹೊಲದಲ್ಲಿ ಸಿಗುವ ತೆಂಗಿನ ಸಿಪ್ಪೆ ಮತ್ತು ತೊಗಟೆ, ತೆಂಗಿನ ಗರಿ ದಿಂಡು, ಎಡೆಮಟ್ಟೆ, ಕುರಂಬಳೆ, ವಿವಿಧ ಮರಗಳ ರೆಂಬೆಗಳು ಮತ್ತು ಇತರೆ ಕೃಷಿ ತ್ಯಾಜ್ಯಗಳನ್ನು ಬಳಸಿ ಕಡಿಮೆ ಗಾಳಿಯಲ್ಲಿ ಅವುಗಳನ್ನು ಸುಟ್ಟು ತಯಾರು ಮಾಡುವುದೆ ಜೈವಿಕ ಇದ್ದಿಲು ಎಂದು ಮಣ್ಣು ವಿಜ್ಞಾನಿ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮುಖ್ಯಸ್ಥರಾದ ಡಾ. ಆರ್. ಕೃಷ್ಣಮೂರ್ತಿ ತಿಳಿಸಿದರು.

ದಕ್ಷಿಣ ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಯೋಜನೆ ಮತ್ತು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರಿಗಾಗಿ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳೆಗಳಿಗೆ ಸಮತೋಲಿತ ಪೋಷಕಾಂಶಗಳನ್ನು ಒದಗಿಸುವ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ಜೈವಿಕ ಇದ್ದಿಲು ಮಣ್ಣಿನ ಸೂಕ್ಷ್ಮಜೀವಿಗಳಿಗೆ ಜೀವರಕ್ಷಕವಾಗಿ ಕೆಲಸ ಮಾಡುವುದಲ್ಲದೆ, ಪೋಷಕಾಂಶಗಳು ಮಳೆ ಅಥವಾ ನೀರಾವರಿಯಿಂದ ಕೊಚ್ಚಿ ಹೋಗದಂತೆ ತಡೆಯುತ್ತದೆ. ಇದನ್ನು ಒಮ್ಮೆ ಜಮೀನಿಗೆ ಸೇರಿಸಿದರೆ ಬಹಳ ವರ್ಷಗಳ ಕಾಲ ಅಲ್ಲೇ ಉಳಿದು ಫಲವತ್ತತೆಯನ್ನು ಕಾಪಾಡುತ್ತದೆ. ಇದು ಬೂದಿಯ ತರಹ ಇರುವುದಿಲ್ಲ, ಬದಲಿಗೆ ಇದರಲ್ಲಿರುವ ಸಣ್ಣ ಸಣ್ಣ ರಂಧ್ರಗಳು ನೀರು ಮತ್ತು ಪೋಷಕಾಂಶಗಳನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳುತ್ತವೆ. ನೀರಿನ ಕೊರತೆ ಇರುವ ರೈತರಿಗೆ ಇದು ಬಹಳ ಉಪಯೋಗ. ಅಲ್ಲದೆ, ರೈತರು ಇಂಗಾಲದ ಸ್ಥಿರೀಕರಣದ ಮೂಲಕ ಕಾರ್ಬನ್ ಕ್ರೆಡಿಟ್ ಪಡೆದು ಮಾರುಕಟ್ಟೆಯಲ್ಲಿ ಮಾರಿ ಹೆಚ್ಚುವರಿ ಆದಾಯ ಕೂಡ ಗಳಿಸಬಹುದು ಎಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎಂ. ಎಚ್. ಶಂಕರ ಅವರು ಮಾತನಾಡಿ, ತುಮಕೂರನ್ನು ಸೇರಿ ಕರ್ನಾಟಕದ ಬಹುಪಾಲು ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿರುವುದು, ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ, ಕಡಿಮೆ ಸಾವಯವ ಗೊಬ್ಬರ, ಮಳೆಯ ಅಸ್ಥಿರತೆ ಮತ್ತು ಮಣ್ಣು ಕೊಚ್ಚಿ ಹೋಗುವಿಕೆ ಇತ್ಯಾದಿ ಕಾರಣಗಳಿಂದ ಮಣ್ಣು ಸತ್ವ ವೇಗವಾಗಿ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕೃಷಿ ತ್ಯಾಜ್ಯದಿಂದ ತಯಾರಿಸಿದ ಬಯೋಚಾರ್ ಜೊತೆಗೆ ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಅಳವಡಿಸಿಕೊಳ್ಳುವುದು ಬೆಳೆಗಳ ಸುಸ್ಥಿರ ಉತ್ಪಾದಕತೆ, ನೀರು–ಪೋಷಕಾಂಶ ಧಾರಣೆ ಮತ್ತು ಮಣ್ಣಿನ ದೀರ್ಘಕಾಲೀನ ಆರೋಗ್ಯವನ್ನು ಪುನರುಜ್ಜೀವನಗೊಳಿಸಲು ಅನಿವಾರ್ಯವಾಗಿದೆ ಎಂದು ಹೇಳಿದರು. ಮತ್ತೊಬ್ಬ ಮಣ್ಣು ವಿಜ್ಞಾನಿ ಡಾ. ಪಿ. ವೀರನಾಗಪ್ಪ ಅವರು ಸಮತೋಲಿತ ಪೋಷಕಾಂಶಗಳ ಮಹತ್ವದ ಕುರಿತು ಮಾತನಾಡಿ, ರೈತರು ಕೇವಲ ಯೂರಿಯಾ, ಡಿಎಪಿ, ಪೋಟ್ಯಾಷ್ ಮಾತ್ರ ಹಾಕುವುದಲ್ಲದೆ, ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣಿಗೆ ಏನು ಬೇಕೋ ಆ ಸೂಕ್ಷ್ಮ ಪೋಷಕಾಂಶಗಳನ್ನೂ ಸರಿಯಾದ ಪ್ರಮಾಣದಲ್ಲಿ ಕೊಡಬೇಕು. ಇದರಿಂದ ಮಣ್ಣು ಫಲವತ್ತಾಗಿರುತ್ತದೆ, ಗೊಬ್ಬರದ ಖರ್ಚು ಉಳಿಯುವುದು ಹಾಗೂ ಒಳ್ಳೆಯ ಇಳುವರಿ ಸಿಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೇಸಾಯಶಾಸ್ತ್ರದ ವಿಜ್ಞಾನಿಯಾದ ಡಾ. ತಸ್ಮಿಯ ಕೌಸರ್ ಮತ್ತು ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಪ್ರಾಯೋಜನೆಯ ಸಹ ಸಂಶೋಧಕರಾದ ಡಾ. ಕೆ. ಗೋವಿಂದ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ರೈತರಿಗೆ ಕೃಷಿ ತ್ಯಾಜ್ಯದಿಂದ ಜೈವಿಕ ಇದ್ದಿಲು ತಯಾರಿಸುವ ಡ್ರಮ್‌ಗಳನ್ನು ವಿತರಿಸಿ, ಅದರ ತಯಾರಿಕಾ ವಿಧಾನದ ಬಗ್ಗೆ ತರಬೇತಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಿಯಾಗಿ ಕಾಲೇಜು ಆಯ್ಕೆ ಮಾಡಿದರೆ ಉತ್ತಮ ಭವಿಷ್ಯ
ಕೇಂದ್ರದ ಬಿಜೆಪಿ ಅಧಿಕಾರದಿಂದ ಯಾರಿಗೂ ನೆಮ್ಮದಿ ಇಲ್ಲ: ಟಿ.ಡಿ.ರಾಜೇಗೌಡ ಟೀಕೆ