ಕನ್ನಡಪ್ರಭ ವಾರ್ತೆ ಪುತ್ತೂರು
ಮನುಷ್ಯರಿಂದ ಉಂಟಾಗುತ್ತಿರುವ ಪೃಕೃತಿಯ ನಾಶ ಮನಗಂಡು ಜೀವ ವೈವಿಧ್ಯ ಕಾಯಿದೆ ೨೦೦೨ರಲ್ಲಿ ಜಾರಿಗೊಳಿಸಲಾಗಿದೆ. ನಮ್ಮ ಸುತ್ತಮುತ್ತಲ ಪರಿಸರದಲ್ಲಿರುವ ಜೀವ ವೈವಿಧ್ಯಗಳ ರಕ್ಷಣೆ ಜೊತೆಗೆ ಸುಸ್ಥಿರ ಬಳಕೆಗಾಗಿ ಜಾರಿಯಾಗಿರುವ ಜೀವ ವೈವಿಧ್ಯ ಕಾಯಿದೆ ಅತ್ಯಂತ ಪ್ರಭಾವಶಾಲಿ ಎಂದು ಬೆಂಗಳೂರು ಜೀವ ವೈವಿಧ್ಯ ಮಂಡಳಿ ಉಪ ನಿರ್ದೇಶಕಿ ಪವಿತ್ರ ಕೆ. ಹೇಳಿದ್ದಾರೆ.ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಪುತ್ತೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಬಲವರ್ದನೆ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕಾನೂನಾತ್ಮಕವಾಗಿರುವ ಜೀವ ವೈವಿಧ್ಯ ಕಾಯಿದೆಯನ್ನು ಸುಲಭವಾಗಿ ಬದಲಾಯಿಸುವುದು, ತಡೆಗಟ್ಟುವುದು ಸಾಧ್ಯವಿಲ್ಲ. ಸ್ಥಳೀಯವಾಗಿರುವ ಈ ಸಮಿತಿ ಸದಸ್ಯರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಕಾಯಿದೆ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರ, ರಾಜ್ಯದಲ್ಲಿ ಜೀವ ವೈವಿದ್ಯ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜೀವ ವೈವಿದ್ಯ ನಿರ್ವಹಣಾ ಮಂಡಳಿ ಎಂಬ ಮೂರು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸುತ್ತ ಮುತ್ತಲ ಜೀವ ವೈವಿದ್ಯಗಳನ್ನು ರಕ್ಷಿಸಿ ಅದನ್ನು ಮುಂದಿನ ಪೀಳಿಗೆಗೆ ಅಭಿವೃದ್ಧಿ ಪಡಿಸುವುದೇ ಈ ಕಾಯಿದೆ ಉದ್ದೇಶ ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಗ್ರಾಮದಲ್ಲಿರುವ ಜೀವ ವೈವಿದ್ಯಗಳನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಉತ್ತಮ ಸ್ಪಂದನೆಯಿದೆ. ಬೆಟ್ಟಂಪಾಡಿಯ ಬೆಂದ್ರ್‌ತೀರ್ಥವನ್ನು ಅಭಿವೃದ್ಧಿಪಡಿಸಿ ಅದನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ, ದಾರ್ಮಿಕ ಹಿನ್ನೆಲೆಯೊಂದಿಗೆ ಸುಂದರ ಪ್ರದೇಶವಾಗಿ ಪ್ರವಾಸಿ ತಾಣದಂತಿರುವ ಪಾಣಾಜೆ ಜಾಂಬ್ರಿ ಪ್ರದೇಶ ಹಾಗೂ ನೆಟ್ಟಣಿಗೆ ಮುಮ್ಮೂರಿನ ಹರ್ಬಲ್ ಗಾರ್ಡನ್‌ಗಳ ಅಭಿವೃದ್ಧಿಗೆ ಗ್ರಾಮದ ಜೀವ ವೈವಿದ್ಯ ಸಮಿತಿ ಮೂಲಕ ಡಿಪಿಆರ್ ಮಾಡಿ ಕಳುಹಿಸಿದರೆ ಅಭಿಪಡಿಸಲು ಸಾಧ್ಯವಿದೆ ಎಂದರು.ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಮಾತನಾಡಿದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ಪ್ರಸನ್ನ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು.ಎನ್‌ಆರ್‌ಎಲ್‌ಎಂ ಸಂಯೋಜಕ ಭರತ್‌ರಾಜ್ ಸ್ವಾಗತಿಸಿ, ನಿರೂಪಿಸಿದರು.