ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಆಟಿ ಆಚರಣೆಯಲ್ಲಿ ವೈಜ್ಞಾನಿಕ ಅಂಶ ಅಡಗಿದ್ದು, ಅದು ಕೇವಲ ಗೊಡ್ಡು ಸಂಪ್ರದಾಯವಲ್ಲ. ಗ್ರಾಮೀಣ ಪ್ರದೇಶದ ಔಷಧೀಯ ಸಸ್ಯ, ಗಿಡ ಮೂಲಿಕೆಗಳಲ್ಲಿ ರೋಗನಿರೋಧಕ ಶಕ್ತಿ ಉದ್ದೀಪನಗೊಳಿಸುವ ವೈಜ್ಞಾನಿಕ ಮಹತ್ವ ಅಡಗಿರುತ್ತದೆ. ಪ್ರತಿಯೊಂದು ವ್ಯಕ್ತಿ, ಪ್ರಾಣಿ, ಜೀವಿ , ಸಸ್ಯಗಳಿಗೂ ಆಯಾ ಋತುಗಳಲ್ಲಿ ಅದರದೇ ಆದ ವಿಶೇಷ ಗುಣವಿರುತ್ತದೆ ಎಂದು ಪಶು ವೈದ್ಯ ಡಾ.ದಿನೇಶ್ ಸರಳಾಯ ಹೇಳಿದ್ದಾರೆ.ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಇತ್ತೀಚೆಗೆ ತುಳು ಶಿವಳ್ಳಿ ಸಭಾ ಉಜಿರೆ ವಲಯದ ವತಿಯಿಂದ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಟಿ ತಿಂಗಳ ಮಹತ್ವ ಹಾಗು ಆಚರಣೆಯ ಹಿಂದಿರುವ ವಿಶೇಷತೆಯ ಕುರಿತು ಅವರು ಮಾತನಾಡಿದರು.
ಆಟಿ ತಿಂಗಳ ಸಂಕಷ್ಟದ ದಿನಗಳಲ್ಲಿ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳು ಹಾಗು ಆಟಿ ಖಾದ್ಯಗಳ ಸೇವನೆ ಆರೋಗ್ಯ ವರ್ಧನೆಗೆ ಪೂರಕವಾಗಿರುತ್ತದೆ. ಪಿತೃ ಪಕ್ಷದಲ್ಲಿ ಹಿರಿಯರಿಗೆ ಪಿಂಡಪ್ರದಾನ, ಆಟಿ ಬಳಸುವ ಕ್ರಮ ರೂಢಿಯಲ್ಲಿದೆ. ಆಚರಣೆಯ ವೈವಿಧ್ಯತೆ ಆಸಕ್ತರಿಗೆ ಸಂಶೋಧನೆಗೆ ವಿಪುಲ ಅವಕಾಶ ಕಲ್ಪಿಸುತ್ತದೆ ಎಂದರು.ತುಳು ಶಿವಳ್ಳಿ ತಾಲೂಕು ಅಧ್ಯಕ್ಷ ರಾಜಪ್ರಸಾದ್ ಪೋಲ್ನಾಯ ಮಾತನಾಡಿ, ಹರಿಹರಾನುಗ್ರಹ ಸಭಾಭವನದ ಬ್ಯಾಂಕ್ ಸಾಲ ಸಂದಾಯಕ್ಕಾಗಿ ‘ಸಂಚಯ ನಿಧಿ’ ಯೋಜನೆ ಆರಂಭಿಸಲು ಯೋಜಿಸಲಾಗಿದ್ದು ಸಮಾಜ ಬಾಂಧವರು ಕೈಜೋಡಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಉಜಿರೆ ವಲಯ ಅಧ್ಯಕ್ಷ ಗಿರಿರಾಜ ಬಾರಿತ್ತಾಯ ಮಾತನಾಡಿ, ಆ. 10 ರಂದು ವಲಯದ ವತಿಯಿಂದ ಉಜಿರೆ ಪಡುವೆಟ್ಟು ಮನೆಯ ಗದ್ದೆಯಲ್ಲಿ ‘ಕೆಸರ್ಡೊಂಜಿ ದಿನ’ ಹಾಗು ಆ. 15 ರಂದು ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲರ ಸಹಕಾರವಿರಲಿ ಎಂದರು. ಉಜಿರೆ ವಲಯದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಆಟಿ ಖಾದ್ಯಗಳನ್ನು ಮನೆಯಲ್ಲಿ ಸಿದ್ಧಪಡಿಸಿ ತಂದ ಮಹಿಳೆಯರನ್ನು ಗುರುತಿಸಲಾಯಿತು. ಅನ್ನಪೂರ್ಣ ಭಟ್ ಸೋಯಾಬೀನ್ ಕ್ಯಾಂಡಲ್ ಬಗ್ಗೆ ಮಾಹಿತಿ ನೀಡಿದರು. ತಾಲೂಕು ತುಳು ಶಿವಳ್ಳಿ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಜಯಾ ಅನಂತಕೃಷ್ಣ ಆರ್ಮುಡತ್ತಾಯ , ಯುವ ವಿಪ್ರ ವೇದಿಕೆ ಅಧ್ಯಕ್ಷ ಸೂರ್ಯನಾರಾಯಣ ಮುರುಡಿತ್ತಾಯ, ಉಜಿರೆ ವಲಯ ಮಹಿಳಾ ಘಟಕ ಕಾರ್ಯದರ್ಶಿ ಶೈಲಜಾ ಪೆಜತ್ತಾಯ ಉಪಸ್ಥಿತರಿದ್ದರು. ಉಜಿರೆ ವಲಯ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಗುರುರಾಜ ಪಡುವೆಟ್ನಾಯ ಸ್ವಾಗತಿಸಿದರು. ಸೂರ್ಯನಾರಾಯಣ ಕೊರ್ನಾಯ ಅತಿಥಿಗಳನ್ನು ಪರಿಚಯಿಸಿದರು. ವಲಯ ಕಾರ್ಯದರ್ಶಿ ಹರ್ಷಕುಮಾರ್ ಕೆ ಎನ್. ವಂದಿಸಿದರು. ದುರ್ಗಾಪ್ರಸಾದ್ ಕೆರ್ಮುಣ್ಣಾಯ ಮತ್ತು ವಾಣಿ ಸಂಪಿಗೆತ್ತಾಯ ನಿರೂಪಿಸಿದರು.ಹರ್ಷಕುಮಾರ್ ಕೆ ಎನ್ ಅವರ ನೇತೃತ್ವದಲ್ಲಿ ನೂರಕ್ಕೂ ಮಿಕ್ಕಿ ಹೂ ,ಹಣ್ಣುಗಳ ಗಿಡಗಳನ್ನು ಪರಿಚಯ ಹಾಗು ವೀಕ್ಷಣೆಗೆ ಪ್ರದರ್ಶಿಸಲಾಗಿತ್ತು. ಸಮಾಜ ಬಾಂಧವರು ಹಾಗು ಮಕ್ಕಳಿಂದ ವಿವಿಧ ಮನರಂಜನೆ, ನೃತ್ಯ ಪ್ರದರ್ಶನ, ಮಹಿಳಾ ಸದಸ್ಯೆಯರಿಂದ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಮಹಿಳೆಯರು ಮನೆಯಲ್ಲೇ ಮಾಡಿ ತಂದ 50ಕ್ಕೂ ಮಿಕ್ಕಿ ವಿಶಿಷ್ಟ ಆಟಿ ಖಾದ್ಯಗಳ ಪ್ರದರ್ಶನ ಹಾಗು ಸವಿರುಚಿ ಆಸ್ವಾದನೆ ನಡೆಯಿತು.