ಯಲ್ಲಾಪುರ: ಅತ್ಯಂತ ಪ್ರಾಮುಖ್ಯತೆ ಹೊಂದಿದ ಬೇಡ್ತಿ ಇಕ್ಕೆಲ ಹಾಗೂ ಜೀವವೈವಿಧ್ಯ ತಾಣಗಳನ್ನು ಸಂರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ಅದನ್ನು ಕಾದಿಡಲು ಅಗತ್ಯವಿರುವ ಯೋಜನೆ ರೂಪಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ವೃಕ್ಷಲಕ್ಷ ಆಂದೋಲನದ ಪ್ರಮುಖ, ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಮೇ ೨೧ರಂದು ಬೇಡ್ತಿ ಹೊಳೆಯಂಚಿನ ಹುಲಿಯಪ್ಪ ದೇವರ ಸನ್ನಿಧಿಯಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರು, ವೃಕ್ಷಲಕ್ಷ ಆಂದೋಲನ ಕರ್ನಾಟಕ, ತಾಪಂ ಯಲ್ಲಾಪುರ ಹಾಗೂ ಜೀವ ವೈವಿಧ್ಯತಾ ನಿರ್ವಹಣಾ ಸಮಿತಿಗಳು ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ನದಿಮೂಲ ಉಳಿಸಿ, ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.ಪರಿಸರದ ವಿವಿಧ ಮಜಲುಗಳು ಬೇಡ್ತಿಕೊಳ್ಳದಲ್ಲಿವೆ. ಇದು ಸಂರಕ್ಷಿತ ಪ್ರದೇಶವಾಗಬೇಕೆಂಬ ನಮ್ಮ ಕೂಗಿಗೆ ಸರ್ಕಾರ ಮಾನ್ಯತೆ ನೀಡಿದ್ದು, ನದಿಮೂಲಗಳನ್ನು ಉಳಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಸುಮಾರು ೨೨ ನದಿಮೂಲಗಳ ರಕ್ಷಣೆಯನ್ನು ನಡೆಸಿಕೊಂಡು ಬಂದಿದ್ದೇವೆ. ವಿವಿಧ ನದಿಮೂಲಗಳಿಗೆ ನಮ್ಮ ತಂಡ ಭೇಟಿ ನೀಡಿ ಸಮಿತಿ ಮತ್ತು ಸಾರ್ವಜನಿಕರ ಜತೆ ಸಮಾಲೋಚನೆ ನಡೆಸಿ, ಜಾಗೃತಿ ಮೂಡಿಸುತ್ತಿದ್ದೇವೆ ಎಂದ ಅವರು, ನಮ್ಮ ಜೀವವೈವಿಧ್ಯತೆಯ ಕಾಡಿನ ರಕ್ಷಣೆಯಲ್ಲಿ ಜನರ ಸಹಭಾಗಿತ್ವ ತೀರಾ ಮುಖ್ಯ. ತೀರಾ ಪ್ರಾಮುಖ್ಯ ಪ್ರದೇಶಗಳನ್ನು ಸಂರಕ್ಷಿತ ಪ್ರದೇಶಗಳಾಗಿ ಘೋಷಿಸಿ ಅದರ ರಕ್ಷಣೆ ಮಾಡಬೇಕು ಎಂದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ತೋಟಗಾರಿಕಾ ವಿಭಾಗದ ಅಧಿಕಾರಿ ಪವಿತ್ರಾ ಮಾತನಾಡಿ, ಪರಿಸರ, ನದಿಮೂಲ ಉಳಿಸಿ ಘೋಷವಾಕ್ಯದೊಂದಿಗೆ ನಮ್ಮ ಮಾದರಿ ಜೀವವೈವಿಧ್ಯ ಸಮಿತಿಗಳ ಮೂಲಕ ಇವುಗಳ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವನ್ನಾಗಿ ಸಂಘಟಿಸಿದ ಬಗ್ಗೆ ಮಂಡಳಿಗೆ ಹೆಮ್ಮೆಯುಂಟಾಗಿದೆ ಎಂದರು.ಸ್ನೇಹಕುಂಜ ಕಾರ್ಯದರ್ಶಿ ಡಾ. ಎನ್.ಆರ್. ಹೆಗಡೆ ವಾನಳ್ಳಿ ಮಾತನಾಡಿ, ನಮ್ಮಲ್ಲಿರುವ ಜೌಗು ಪ್ರದೇಶಗಳನ್ನು ಗುರುತಿಸುವ ಕೆಲಸವಾಗಬೇಕು. ದೇವರಕಾಡನ್ನು ಗುರುತಿಸಿ, ಉಳಿಸುವ ಕುರಿತಾಗಿಯೂ ಯೋಜನೆ ರೂಪಿಸಬೇಕು. ನಮ್ಮಿಂದ ಕಾಣೆಯಾಗುತ್ತಿರುವ ವಿಶೇಷವಾಗಿ ಬೇಡ್ತಿ ಆಸುಪಾಸು ಮಾತ್ರ ಲಭ್ಯವಿರುವ ಬಿಳಿಮತ್ತಿಯಂಥ ಮರಗಳು ವಿನಾಶವಾಗದಂತೆ ತಡೆದು ಸಂರಕ್ಷಿಸುವತ್ತ ಗಮನ ಹರಿಸಬೇಕು ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ ಮಾತನಾಡಿದರು. ಜೀವವೈವಿಧ್ಯ ಮಂಡಳಿಯ ಸಹಾಯಕ ಸಂರಕ್ಷಣಾಧಿಕಾರಿ ಕುಮಾರ ಕೆ.ಎಂ., ತಜ್ಞ ಪ್ರಸನ್ನ, ಸೊರಬ ಪರಿಸರ ವೇದಿಕೆ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರಾದ ನರಸಿಂಹ ಸಾತೊಡ್ಡಿ, ಕೆ.ಎಸ್. ಭಟ್ಟ ಆನಗೋಡು, ಚಂದಗುಳಿ ಪಿಡಿಒ ರಾಜೇಶ ಶೇಟ್, ಕಾರ್ಯದರ್ಶಿ ತುಕಾರಾಮ ನಾಯ್ಕ, ಆನಗೋಡ ಪಿಡಿಒ ನಾರಾಯಣ ಗೌಡ, ತಾಪಂನ ಗಣಪತಿ ಭಾಗ್ವತ್, ಅರಣ್ಯಾಧಿಕಾರಿಗಳೂ ಸೇರಿದಂತೆ ವೃಕ್ಷಲಕ್ಷ ಆಂದೋಲನದ ಗಣಪತಿ ಕೆ. ಬಿಸ್ಲಕೊಪ್ಪ, ಸ್ಥಾನಿಕರಾದ ನಾಗೇಶ ಭಟ್ಟ ಮಳಲಗಾಂವ್, ಶ್ರೀಕಾಂತ ಭಟ್ಟ, ಜೇನು ತಜ್ಞ ರಾಮಾ ಮರಾಠೆ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಪೂರ್ವದಲ್ಲಿ ಅನಂತ ಅಶೀಸರ ಹಾಗೂ ಜೀವವೈವಿಧ್ಯ ಮಂಡಳಿಯ ಅಧಿಕಾರಿ ಪವಿತ್ರಾ ಬೇಡ್ತಿ ನದಿಗೆ ಬಾಗಿನ ಸಮರ್ಪಿಸಿದರು.