ಕಾರವಾರ: ದೇಶದಲ್ಲೇ ಅಪರೂಪವಾದ ಜೀವ ವೈವಿಧ್ಯತೆಯು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಈ ಜೀವವೈವಿಧ್ಯತೆಯನ್ನು ಸಂರಕ್ಷಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ತಿಳಿಸಿದರು.
ನಗರದ ವನಸಿರಿ ಸಭಾಂಗಣದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಸಾಮಾಜಿಕ ಅರಣ್ಯವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಜೀವ ವೈವಿಧ್ಯತೆಯ ಸಂರಕ್ಷಣೆಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯು ಪಶ್ಚಿಮ ಘಟ್ಟ ಹಾಗೂ ಜೀವವೈವಿಧ್ಯತೆಗಳನ್ನು ಒಳಗೊಂಡಿದೆ. ಇಲ್ಲಿ ಸಸ್ಯ, ಪ್ರಾಣಿ, ಪಕ್ಷಿಗಳು ಸೇರಿದಂತೆ ಸೂಕ್ಷ್ಮಾಣು ಜೀವಿಗಳಿಂದ ದೈತ್ಯಾಕಾರದ ಜೀವ ಸಂಕುಲದವರೆಗೂ ಕಾಣಬಹುದು. ಹೀಗಾಗಿ ಜಿಲ್ಲೆಯನ್ನು ಜೀವವೈವಿಧ್ಯತೆಯ ಹೃದಯ ಭಾಗವಾಗಿದ್ದು, ಈ ಜೀವ ವೈವಿಧ್ಯತೆಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.ಜೀವ ವೈವಿಧ್ಯತೆ ಸಂರಕ್ಷಣೆಯನ್ನು ಕೇವಲ ಅರಣ್ಯ ಇಲಾಖೆಯ ವತಿಯಿಂದ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಕೂಡ ಕೈಜೋಡಿಸಿದಾಗ ಮಾತ್ರ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಜೀವ ವೈವಿಧ್ಯತೆಯ ಸಂರಕ್ಷಣೆಯ ಬಗ್ಗೆ ರೈತರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಸಂರಕ್ಷಣೆ ಮಾಡಲು ಸಾಧ್ಯ. ಪ್ರಪಂಚದಲ್ಲಿ 5 ಸಾವಿರ ಸಸ್ಯ ಪ್ರಭೇದಗಳಿದ್ದು, ಅದರಲ್ಲಿ 1600 ಪ್ರಭೇದಗಳು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಲು ಸಿಗುತ್ತವೆ ಎಂದರು.ಕರ್ನಾಟಕ ಜೀವವೈವಿಧ್ಯ ಮಂಡಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್ ಸಿಂಗ್ ಎಂ.ಜೆ. ಮಾತನಾಡಿ, ಗ್ರಾಪಂ ಮಟ್ಟದಿಂದ ಜೀವವೈವಿಧ್ಯತೆಯ ಕುರಿತು ಅರಿವು ಮೂಡಿಸಬೇಕು. ಮನುಷ್ಯರು ಪರಾವಲಂಬಿ ಜೀವಿಗಳಾಗಿದ್ದು, ತಮ್ಮ ಉಳಿವಿಗಾಗಿ ಹಾಗೂ ಆಹಾರಕ್ಕಾಗಿ ಹಲವು ಜೀವ ಸಂಕುಲಗಳನ್ನು ಅವಲಂಬಿಸಿದ್ದೇವೆ. ಪರಿಸರದ ಜೀವರಾಶಿಗಳನ್ನು ಅತಿಯಾದ ಬಳಕೆ ಮಾಡದೇ ಸುಸ್ಥಿರವಾವಾಗಿ ಬಳಸಿಕೊಂಡು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ 2002ರಲ್ಲಿ ಜೀವವೈವಿಧ್ಯತೆ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರು, ಕರ್ನಾಟಕ ಜೀವವೈವಿಧ್ಯ ಮಂಡಳಿ(ತೋಟಗಾರಿಕೆ) ಉಪನಿರ್ದೇಶಕಿ ಪವಿತ್ರ ಕೆ.ಎ., ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಸಾಮಾಜಿಕ ಅರಣ್ಯ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ವಿನಯ ಕುಮಾರ, ಸಂಪನ್ಮೂಲ ವ್ಯಕ್ತಿ ಪ್ರೊ. ಜೆ.ಎಲ್. ರಾಥೋಡ್ ಮೊದಲಾದವರು ಇದ್ದರು.ಇಂದು ವನವಾಸಿ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವಯಲ್ಲಾಪುರ: ವನವಾಸಿ ಕಲ್ಯಾಣದ ಶ್ರೀರಾಮ ವನವಾಸಿ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಜ. ೧೧ರಂದು ಸಂಜೆ ೩ ಗಂಟೆಗೆ ತಾಲೂಕಿನ ಗಡಿಭಾಗದ ಚಿಪಗೇರಿಯ ವಿದ್ಯಾರ್ಥಿನಿಲಯದ ಆವರಣದಲ್ಲಿ ನಡೆಯಲಿದೆ.ಭರತನಹಳ್ಳಿ ವಿ.ಪ್ರಾ.ಗ್ರಾ. ಸಂಘದ ಅಧ್ಯಕ್ಷ ಹೇರಂಬ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿದ್ಯಾರ್ಥಿನಿಲಯದ ಅಧ್ಯಕ್ಷ ಮಂಜುನಾಥ ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ರಾಜ್ಯ ವನವಾಸಿ ಕಲ್ಯಾಣದ ಸಹಸೇವಾ ಪ್ರಮುಖ ಡಾ. ಸುರೇಶ ಹೆಗಡೆ ಕುಮಟಾ ವಕ್ತಾರರಾಗಿ ಆಗಮಿಸುವರು. ಕರೆ ಒಕ್ಕಲಿಗ ಸಮುದಾಯದ ಕಲಾವಿದ ಬೆಳ್ಳು ಗೌಡ, ಮುಂಡಗೋಡಿನ ಉದ್ಯಮಿ ರೇಖಾ ಅಂಡಗಿ, ಮುಂಡಗೋಡಿನ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಪಾಂಡುರಂಗ ಟಿಕ್ಕೋಜಿ, ಕೃಷಿಕ ರಾಮಚಂದ್ರ ಹೆಗಡೆ ಉಚಗೇರಿ ಅತಿಥಿಗಳಾಗಿ ಪಾಲ್ಗೊಳ್ಳುವರು. ದನಗರ ಗೌಳಿ ಸಮುದಾಯದ ಮೊದಲ ಲೆಕ್ಕ ಪರಿಶೋಧಕ ಬಾಗು ಡೊಯಿಪುಡೆ ಮಜ್ಜಿಗೆಹಳ್ಳ ಮತ್ತು ಸಹಕಾರಿ ಸನ್ಮಾನಿತರಾದ ಪಾರ್ವತಿ ಸಿದ್ದಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.