ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಅಕ್ಕಪಕ್ಕದ ತೆಲಂಗಾಣ-ಆಂಧ್ರಪ್ರದೇಶದ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲಿಯೇ ಗಡಿ ಜಿಲ್ಲೆ ರಾಯಚೂರಿನಲ್ಲಿ ಪಕ್ಷಗಳು ನಿಗೂಢವಾಗಿ ಸಾವನಪ್ಪುತ್ತಿದ್ದು ಇದರಿಂದಾಗಿ ಹಕ್ಕಿಜ್ವರ ಜಿಲ್ಲೆಗೂ ಹರಡಿರುವ ಸಂಶಯ ಉಂಟಾಗಿದ್ದರಿಂದ ಸಾರ್ವಜನಿಕರಲ್ಲಿ ಭೀತಿ ಶುರುವಾಗಿದೆ.ಕಳೆದ ವಾರದಿಂದ ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ, ರತ್ನಪಕ್ಷಿ, ಬೆಳ್ಳಕ್ಕಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿವೆ, ಮಾನ್ವಿ ಪಟ್ಟಣ, ರಬಣಕಲ್, ಚೀಕಲಪರ್ವಿ ಸೇರಿ ಹಲವೆಡೆ ದಿನನಿತ್ಯ ರೈತರ ಜಮೀನು, ತೋಟ ಹಾಗೂ ಮರ ಗಿಡಗಳಿಂದ ಪಕ್ಷಿಗಳು ಏಕಾಏಕಿ ಕೆಳಗೆ ಬಿದ್ದು ಮೃತಪಡುತ್ತಿವೆ. ಇಂತಹ ಸನ್ನಿವೇಶ ಎಂದೂ ಕಂಡಿಲ್ಲ:
ಕಳೆದ ನಾಲ್ಕೈದು ದಿನಗಳಿಂದ ಮಕ್ಸೂದ್ ಅಲಿ ಎಂಬುವವರ ತೋಟದಲ್ಲಿ ಪ್ರತಿದಿನ 8 ರಿಂದ 10 ಪಕ್ಷಿಗಳು ಸಾವನ್ನಪ್ಪುತ್ತಿದ್ದು, ಇಂತಹ ಸನ್ನಿವೇಶವನ್ನು ನಾವು ಎಂದೂ ಕಂಡಿಲ್ಲವೆಂದು ತೋಟದ ಮಾಲೀಕರು ಆತಂಕದ ಜೊತೆಗೆ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ನೀರು ನೆರಳಿಲ್ಲದೇ ಪಕ್ಷಗಳು ಮೃತಪಟ್ಟಿದ್ದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಹಲವು ಪ್ರಭೇದದ ಹಕ್ಕಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಕೆಲಹೊತ್ತಿನಲ್ಲಿ ಸಾವನ್ನಪ್ಪುತ್ತಿವೆ. ಕೆಳಗೆ ಬಿದ್ದ ಬಳಿಕ ಕುಡಿಯಲು ನೀರನ್ನು ಇಟ್ಟರೂ ಕುಡಿಯದೇ ಪಕ್ಷಿಗಳು ಸಾವನ್ನಪ್ಪುತ್ತಿವೆ. ಪಕ್ಷಿಗಳ ಸಾವಿಗೆ ಕಾರಣ ತಿಳಿಯುತ್ತಿಲ್ಲ. ಆದರೆ ವಿವಿಧೆಡೆ ಹಕ್ಕಿ ಜ್ವರ ದ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಪಕ್ಷಗಳ ಸಾವು ಸ್ಥಳೀಯರಿಗೆ ಹಕ್ಕಿಜ್ವರದ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ.ಪಶು ವೈದ್ಯರಿಂದ ಪರಿಶೀಲನೆ:ತೀವ್ರವಾದ ಭೇದಿಯಿಂದ ಬಳಲಿ ಮೂರು ದಿನಗಳ ನಂತರ ಪಕ್ಷಗಳು ಏಕಾಏಕಿ ನೆಲಕ್ಕೆ ಬಿದ್ದು ಸಾವನಪ್ಪುತ್ತಿವೆ. ಘಟನೆಗಳ ಮಾಹಿತಿ ಪಡೆದ ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಕೆಳಗೆ ಬಿದ್ದ ಪಕ್ಷಿಗಳಿಗೆ ಚುಚ್ಚುಮದ್ದನ್ನು ನೀಡಿ ರಕ್ಷಣೆ ಮಾಡುವ ಪ್ರಯತ್ನವನ್ನೂ ನಡೆಸಿದ್ದಾರೆ. ಮೃತಪಟ್ಟ ಪಕ್ಷಿಗಳ ಕಳೇಬರವನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅಲ್ಲಿಂದ ವರದಿ ಬಂದ ನಂತರವೇ ಪಕ್ಷಿಗಳ ಸಾವಿಗೆ ನಿಖರವಾದ ಕಾರಣವು ತಿಳಿಯಲಿದೆ. ಮಾನ್ವಿ ತಾಲ್ಲೂಕಿನಲ್ಲಿ ಪಕ್ಷಿಗಳ ಸಾವಿಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಬದುಕಿರುವ ಪಕ್ಷಿಗಳಿಗೆ ಚಿಕಿತ್ಸೆ ನೀಡಿದ್ದು, ಮೃತ ಪಕ್ಷಿಗಳ ಕಳೆಬರದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಪ್ರಯೋಗಾಲಯದ ವರದಿ ಬರುವ ತನಕ ಪಕ್ಷಿಗಳ ಸಾವಿಗೆ ನಿಖರ ಕಾರಣ ಹೇಳಲು ಬರುವುದಿಲ್ಲ. ವರದಿ ಬಂದ ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅಶೋಕ ಕೋಲ್ಕರ್ ಹೇಳಿದರು.ಇನ್ನು, ಮಾನ್ವಿ ಪಶು ವೈದ್ಯಾಧಿಕಾರಿ ಡಾ.ಬಸವರಾಜ ಹಿರೇಮಠ ಮಾತನಾಡಿ, ಪಕ್ಷಿ ಪ್ರೇಮಿಗಳು, ರೈತರ ಮಾಹಿತಿ ಸ್ಥಳಕ್ಕೆ ಬಂದು ಪರಿಶೀಲಿಸಲಾಗಿದೆ. ಸಾವಿಗೆ ಸಾಕಷ್ಟು ಕಾರಣಗಳಿರಬಹುದು ಮೃತ ಪಕ್ಷಿಗಳ ಕಳೇಬರವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮವನ್ನು ವಹಿಸಲಾಗುವುದು. ಅಲ್ಲಿಯವರೆಗೆ ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು.