ಕನ್ನಡಪ್ರಭ ವಾರ್ತೆ ವಿಜಯಪುರದಲಿತ ಜನಾಂಗವನ್ನು ಮೊದಲ ಸಾಲಿಗೆ ತರಬೇಕು, ಶೋಷಿತ ಸಮುದಾಯಗಳಿಗೆ ಎಲ್ಲ ಹಕ್ಕು ಭಾದ್ಯತೆಗಳು ಸಿಗಬೇಕು, ನೀರಿಗೆ ಜಾತಿ ಇಲ್ಲ, ಬೆಳಕಿಗೆ ಜಾತಿ ಇಲ್ಲ, ಗಾಳಿಗೆ ಜಾತಿ ಇಲ್ಲ, ಮನುಷ್ಯ ಜಾತಿ ಒಂದೇ ಎಂದು ಹೋರಾಟದ ಹೆಜ್ಜೆ ಹಾಕಿದವರು ಲಕ್ಷ್ಮೀ ನಾರಾಯಣ್ ನಾಗವಾರ. ಆದ್ದರಿಂದ ಅವರನ್ನು ಸಂಘಟನಾ ಚೇತನ ಎಂದು ಹೇಳಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಮುಖ್ಯಮಂತ್ರಿಯವರ ಮಾತು ದಲಿತ ಹೊರಾಟಗಾರರ ಮೇಲೆ ತೋರಿದ ಪ್ರೀತಿ ಹಾಗೂ ಕಾಳಜಿ ನೋಡಿದಾಗ ತಾಯಿ ಹೃದಯದ ಮುಖ್ಯಮಂತ್ರಿ ಎನ್ನಬೇಕಾಗುತ್ತದೆ. ಅಲ್ಲದೇ ಲಕ್ಷ್ಮೀ ನಾರಾಯಣ ನಾಗವಾರ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲು ಆದೇಶಿದ ಮುಖ್ಯಮಂತ್ರಿಯವರಿಗೆ ರಾಜ್ಯ ದಲಿತ ಸಂಘರ್ಷ ಸಮಿತಿ ಅಭಿನಂದನೆ ಸಲ್ಲಿಸುತ್ತದೆ. ನಾಗಾವರ ಅವರು ಇಲ್ಲಿಯವರೆಗೆ ಎಳೆದು ತಂದಿರುವ ಸೈದ್ಧಾಂತಿಕ ಹೋರಾಟದ ರಥವನ್ನು ಮುಂದೆ ಎಳೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಜವಳಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಲಕ್ಷ್ಮೀ ನಾರಾಯಣ್ ನಾಗವಾರರು ಶಿಸ್ತಿನ ಸಿಪಾಯಿಯಂತೆ ದಲಿತರ ಹಾಗೂ ಶೋಷಿತರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ದಲಿತ ಚಳುವಳಿಯ ಹೋರಾಟಗಾರರ ಹೆಜ್ಜೆ ಗುರುತುಗಳನ್ನು ಅವಲೋಕಿಸಿದಾಗ ಬುದ್ಧ, ಬಸವ, ಪುಲೆ, ಅಂಬೇಡ್ಕರ್ ರಂತಹ ಮಹಾತ್ಮರ ಜೀವನ ಹಾಗೂ ವಿಚಾರಧಾರೆಗಳು ಲಕ್ಷ್ಮೀನಾರಾಯಣ ನಾಗವಾರ ಅವರ ತಿಳುವಳಿಕೆಯನ್ನು ವಿಸ್ತರಿಸುತ್ತದೆ. ದಲಿತ ಚಳುವಳಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ, ದಲಿತ ಕವಿ ಡಾ.ಸಿದ್ದಲಿಂಗಯ್ಯ, ಸಾಹಿತಿ ದೇವನೂರು ಮಹದೇವ ಹಾಗೂ ಪ್ರಬುದ್ಧ ರಾಜಕಾರಣಿ ಬಿ.ಬಸವಲಿಂಗಪ್ಪ ಹೀಗೆ ಹಲವಾರು ಸಾಹಿತಿಗಳು ಚಿಂತಕರು ಮತ್ತು ಪ್ರಗತಿಪರರ ಮಾರ್ಗದರ್ಶನದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದಲ್ಲಿ ಗುರುತಿಸಿಕೊಂಡು ರಾಜ್ಯದ ಮೂಲೆ ಮೂಲೆಗಳಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿದರು. ಸಂಘಟನಾ ಚತುರನಾಗಿ ಹೊರಹೊಮ್ಮಿದರು. ಸೈದ್ದಾಂತಿಕ ಕಾರಣಗಳಿಂದಾಗಿ ಅಂದಿನ ದಸಂಸ ವಿವಿಧ ಬಣಗಳಾಗಿ ವಿಭಜನೆಯಾದಾಗ ಲಕ್ಷ್ಮೀನಾರಾಯಣ ನಾಗವಾರ ಅವರು ರಾಜ್ಯ ದಲಿತ ಸಂಘರ್ಷ ಸಮಿತಿನ್ನು ಸ್ಥಾಪಿಸಿ ರಾಜ್ಯ ಸಂಚಾಲಕರಾಗಿ ಮುಂದಾಳತ್ವವನ್ನು ವಹಿಸಿದ್ದರು ಎಂದರು.ಕಾರ್ಯಕ್ರಮದಲ್ಲಿ ಡಾ.ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ಶ್ಯಾಮರಾವ ಘಾಟಗೆ, ಚಂದ್ರಕಾಂತ ಸಿಂಗೆ, ಕೆಂಪಣ್ಣ ಸಾಗ್ಯ, ಆನೇಕಲ ವೆಂಟಕೇಶ ಮೂರ್ತಿ, ಮಾಜಿ ಶಾಸಕ ರಾಜು ಆಲಗೂರ, ಬಸವರಾಜ ಸೂಳಿಭಾವಿ, ಎಫ್.ವೈ.ದೊಡಮನಿ, ಶೋಭಾ ಕಟ್ಟಿಮನಿ, ಡಾ.ಪ್ರಭುಗೌಡ ಲಿಂಗದಳ್ಳಿ, ಎಸ್.ಎಂ. ಪಾಟೀಲ ಗಣಿಹಾರ, ರಮೇಶ ಆಸಂಗಿ, ರವಿ ನಾಯ್ಕೋಡಿ, ಅಭಿಷೇಕ ಚಕ್ರವರ್ತಿ, ಸಿದ್ದು ರಾಯಣ್ಣವರ, ಸಂಜು ಕಂಭಾಗಿ, ವಿನಾಯಕ ಗುಣಸಾಗರ ಅಶೋಕ ಚಲವಾದಿ ರಾವುತ ತಳಕೇರಿ ಮುಂತಾದವರು ಇದ್ದರು.