ಉತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡಿದರೆ ಉನ್ನತ ಸ್ಥಾನ: ಅರವಿಂದ ರಾಘವನ್

KannadaprabhaNewsNetwork | Published : Feb 28, 2025 12:45 AM

ಸಾರಾಂಶ

ಪಾಂಡವಪುರ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅಭಿವೃದ್ಧಿಗೆ ಬಾಲಭೈರವೇಶ್ವರ ಟ್ರಸ್ಟ್ ನಿಂದ ಅಗತ್ಯ ನೆರವು ನೀಡುತ್ತಾ ಬಂದಿದ್ದೇನೆ. ಕಳೆದ ಐದಾರು ವರ್ಷಗಳಿಂದ ನ.ಭದ್ರಯ್ಯ ಶಾಲೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚಿನ ನೆರವು ನೀಡಿ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅಭಿವೃದ್ಧಿಗೆ ಕೈಜೋಡುತ್ತೇನೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕ ಅರವಿಂದ ರಾಘವನ್ ಹೇಳಿದರು.

ತಾಲೂಕಿನ ಬೆಳ್ಳಾಳೆ ಗ್ರಾಮದ ನ.ಭದ್ರಯ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ರಂಗ ಮಂಟಪ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅಭಿವೃದ್ಧಿಗೆ ಬಾಲಭೈರವೇಶ್ವರ ಟ್ರಸ್ಟ್ ನಿಂದ ಅಗತ್ಯ ನೆರವು ನೀಡುತ್ತಾ ಬಂದಿದ್ದೇನೆ. ಕಳೆದ ಐದಾರು ವರ್ಷಗಳಿಂದ ನ.ಭದ್ರಯ್ಯ ಶಾಲೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚಿನ ನೆರವು ನೀಡಿ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅಭಿವೃದ್ಧಿಗೆ ಕೈಜೋಡುತ್ತೇನೆ ಎಂದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡಬೇಕು. ಆಗ ಮಾತ್ರ ಸೇವೆ ಸಾರ್ಥಕತೆ ದೊರಕುತ್ತದೆ ಎಂದರು.

ಶಾಲೆಯಲ್ಲಿ ನೂತನ ರಂಗ ಮಂಟಪ ನಿರ್ಮಾಣಕ್ಕೆ ನೆರವು ನೀಡಿದ ನಿವೃತ್ತ ಉಪನ್ಯಾಸಕಿ ಕಲಾಶ್ರೀ ಅವರು ನೂತನ ರಂಗಮಂಟಪ ಉದ್ಘಾಟಿಸಿ ಮಾತನಾಡಿ, ನ.ಭದ್ರಯ್ಯ ಶಾಲೆಯು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪ್ರೋತ್ಸಾಹ ನೀಡಲಾಗುತ್ತಿದೆ. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಗೌರವಾಧ್ಯಕ್ಷ ಪ್ರೊ.ಜೆ.ವೀರೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಗೆ ನೆರವು ನೀಡಿದ ಉಮಾಶಂಕರ್ ಅವರ ತಂದೆ-ತಾಯಿ ಕೃಷ್ಣ ದಂಪತಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಎನ್.ರಾಜೇಂದ್ರ, ಸಿಆರ್‌ಪಿ ಯದುರಾಜ್, ಮುಖ್ಯ ಶಿಕ್ಷಕ ಎ.ಆರ್.ನಂದೀಶ್, ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

Share this article