ಕನ್ನಡಪ್ರಭ ವಾರ್ತೆ ತುಮಕೂರು
ತಮ್ಮ ಕಚೇರಿಯಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಕಿ ಅವಘಡಗಳುಂಟಾದಲ್ಲಿ ಪಾರಾಗುವ ಹಾಗೂ ಕಾಲ್ತುಳಿತ, ನೂಕು- ನುಗ್ಗಲುಗಳಾಗದಂತೆ ಸಂಯಮದಿಂದ ನಡೆದುಕೊಳ್ಳುವ ಬಗ್ಗೆ ಎಲ್‌ಇಡಿ ಪರದೆ ಅಳವಡಿಸಿ ಕಿರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಜನ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಭಕ್ತಾದಿಗಳಿಗೆ ವಿತರಿಸುವ ಪ್ರಸಾದ ತಯಾರಿಸಲು ಶುದ್ಧ ಕುಡಿಯುವ ನೀರನ್ನೇ ಬಳಸಬೇಕು. ಸ್ವಾಮಿಯ ದರ್ಶನಕ್ಕೆ ಕುಟುಂಬ ಸಮೇತ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೂಲಭೂತ ಸೌಕರ‍್ಯಗಳನ್ನು ಒದಗಿಸಬೇಕು. ಜಾತ್ರಾ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿಯನ್ನು ನಿಯೋಜಿಸಬೇಕು. ಜಾತ್ರಾ ಕೆಲಸ- ಕಾರ್ಯಗಳಿಗೆ ನಿಯೋಜಿಸುವ ಸಿಬ್ಬಂದಿಗೆ ಧರಿಸಲು ದೇವಸ್ಥಾನದ ಚಿಹ್ನೆಯಿರುವ ಒಂದೇ ಬಣ್ಣದ ಮೇಲು ಅಂಗಿಯನ್ನು ನೀಡಬೇಕು. ಇದರಿಂದ ಸಮಸ್ಯೆಗಳುಂಟಾದಾಗ ನೆರವು ಕೋರಲು ಭಕ್ತಾದಿಗಳಿಗೆ ಅನುವಾಗುತ್ತದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಮಾರ್ಚ್ 29 ರಿಂದ ಏಪ್ರಿಲ್ 12ರವರೆಗೆ ನಡೆಯುವ ಜಾತ್ರೆ ವೇಳೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು. ತಾತ್ಕಾಲಿಕ ಆಸ್ಪತ್ರೆ ಪ್ರಾರಂಭಿಸಿ ತುರ್ತು ಚಿಕಿತ್ಸಾ ವಾಹನ ಹಾಗೂ ಅಗತ್ಯ ಔಷಧಿಯನ್ನು ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಾತ್ರೆಗೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದರಲ್ಲದೆ, ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ವಿತರಿಸುವ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಯಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಆರೋಗ್ಯ, ಅಗ್ನಿಶಾಮಕ, ಪಶುಪಾಲನಾ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸೇರಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.