ಸಿದ್ಧಗಂಗೆಯ ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ಸಂಪನ್ನ

KannadaprabhaNewsNetwork |  
Published : Feb 28, 2025, 12:45 AM IST

ಸಾರಾಂಶ

ಶಿವರಾತ್ರಿ ಪ್ರಯುಕ್ತ ಜಾಗರಣೆಗಾಗಿ ನಾಡಿನಾದ್ಯಂತ ಸಹಸ್ರಾರು ಭಕ್ತಾದಿಗಳು ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ್ದು, ಗುರುವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಕನ್ನಡಪ್ರಭ ವಾರ್ತೆ ತುಮಕೂರು

ಐತಿಹಾಸಿಕ ಪ್ರಸಿದ್ಧ ಸಿದ್ಧಗಂಗೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಶ್ರೀಕ್ಷೇತ್ರ ಸಿದ್ಧಗಂಗೆಯ ಆರಾಧ್ಯದೈವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ಬೆಳಗ್ಗೆ 11.55ಕ್ಕೆ ಸರಿಯಾಗಿ ಶುಭ ಲಗ್ನದಲ್ಲಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ರಥೋತ್ಸವದಲ್ಲಿ ಶ್ರೀಕ್ಷೇತ್ರದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಪಾಲ್ಗೊಂಡು ರಥವನ್ನು ಮುಂದಕ್ಕೆ ಎಳೆದು ಭಕ್ತಿ ಸಮರ್ಪಿಸಿದರು.

ಇದಕ್ಕೂ ಮುನ್ನ ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಃ, ಕಳಸಗಳ ಆರಾಧನೆ, ರಥಾಂಗ ಪೂಜೆ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿ ಶ್ರೀಕ್ಷೇತ್ರದ ಆರಾಧ್ಯ ದೈವ ಸಿದ್ಧಲಿಂಗೇಶ್ವರಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಮತ್ತು ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು. ರಥದ ಮುಂಭಾಗದಲ್ಲಿ ಜಯಾದಿ ಹೋಮ, ಗಣ ಹೋಮ, ಮೃತ್ಯುಂಜಯ ಹೋಮ ಸಹ ಮಾಡಲಾಯಿತು.

ರಥವನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು.

ರಥ ಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು.

ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.

ಶಿವರಾತ್ರಿ ಪ್ರಯುಕ್ತ ಜಾಗರಣೆಗಾಗಿ ನಾಡಿನಾದ್ಯಂತ ಸಹಸ್ರಾರು ಭಕ್ತಾದಿಗಳು ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ್ದು, ಗುರುವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಶ್ರೀಕ್ಷೇತ್ರದಲ್ಲಿಂದು ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಕ್ತಾದಿಗಳು ಶ್ರೀಮಠದ ಶಾಲಾ ಕಟ್ಟಡಗಳ ಮೇಲೆ ಹತ್ತಿ ರಥೋತ್ಸವವನ್ನು ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳಿಂದ ಪಾನಕ, ಮಜ್ಜಿಗೆಯನ್ನು ವಿತರಿಸಲಾಯಿತು.

ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಭಕ್ತಾದಿಗಳಿಗೆ ವಿಶೇಷ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ