ಕನ್ನಡಪ್ರಭ ವಾರ್ತೆ ಬೇಲೂರು
ಸ್ಥಳೀಯ ನಿವಾಸಿ ಅಕ್ಮಲ್ ಮಾತನಾಡಿ, ಮರದ ಎರಡೂ ಬದಿಗಳಲ್ಲೂ ವಿದ್ಯುತ್ ಲೈನ್ ಹೋಗಿದೆ. ಮಳೆ ಬಂದಾಗ ಕರೆಂಟ್ ಗ್ರೌಂಡ್ ಆಗಿ ಮರದಲ್ಲಿರುವ ಹಕ್ಕಿಗಳಿಗೆ ಶಾಕ್ ತಗುಲಿ ಪ್ರತಿದಿನ 10ರಿಂದ 12 ಹಕ್ಕಿಗಳು ಸಾಯುತ್ತಿವೆ. ಸತ್ತ ಹಕ್ಕಿಗಳಿಂದ ಭಾರೀ ದುರ್ವಾಸನೆ ಬರುತ್ತಿದ್ದು, ಜನರು ಇಲ್ಲಿ ನಿಲ್ಲಲು ಸಹ ಆಗುತ್ತಿಲ್ಲ. ಮರದಲ್ಲಿ ಅನೇಕ ಹಕ್ಕಿಗಳು ಗೂಡು ಕಟ್ಟಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಸತ್ತ ಹಕ್ಕಿಗಳನ್ನು ತಾವೇ ತೆರವುಗೊಳಿಸಿ ಕಸದ ಬುಟ್ಟಿಗೆ ಹಾಕುತ್ತಿದ್ದರೂ ದುರ್ವಾಸನೆ ಕಡಿಮೆಯಾಗುತ್ತಿಲ್ಲ. ಅಲ್ಲದೆ, ಕೆಲವರು ಇದೇ ಪ್ರದೇಶದಲ್ಲಿ ಕಸ ಹಾಕುತ್ತಿರುವುದರಿಂದ ಪರಿಸರ ಸಂಪೂರ್ಣ ಕಸದ ಗುಂಡಿಯಂತಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.ಈ ಕುರಿತು ಪುರಸಭೆಗೆ ಹಲವು ಬಾರಿ ಮಾಹಿತಿ ನೀಡಿದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮರವನ್ನು ಕಡಿಸಲು ಯತ್ನಿಸಿದರೂ ವಿದ್ಯುತ್ ತಂತಿಗಳಿರುವ ಕಾರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಸ್ಕಾಂ, ಪುರಸಭೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಂಬೇಡ್ಕರ್ ಪುತ್ಥಳಿಯಂತಹ ಪ್ರಮುಖ ಸ್ಥಳದ ಹಿಂಭಾಗವೇ ಅವ್ಯವಸ್ಥೆಯಿಂದ ಕೂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಯಕ್ರಮಗಳ ಸಮಯದಲ್ಲಿ ರಾಜಕಾರಣಿಗಳು ಹಾಗೂ ಸಂಘಟನೆಗಳು ಬಂದು ಹಾರ ಹಾಕಿ ಹೋಗುತ್ತಾರೆ. ಆದರೆ ಸುತ್ತಮುತ್ತಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಯಾರೂ ಗಮನಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಳೆಯ ಸಮಯದಲ್ಲಿ ಆಲದ ಮರದ ಹತ್ತಿರದ ಶೆಡ್‌ಗಳಿಗೂ ಕರೆಂಟ್ ಹರಿಯುವ ಭೀತಿ ಎದುರಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ತುರ್ತು ಕ್ರಮ ಕೈಗೊಂಡು ಸಾರ್ವಜನಿಕರ ಸುರಕ್ಷತೆ ಹಾಗೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.