ಕನ್ನಡಪ್ರಭ ವಾರ್ತೆ ಬೇಲೂರು ವೀರ ಸಾವರ್ಕರ್‌ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಆದರ್ಶಗಳು ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ದೇಶಭಕ್ತ ಬಳಗದ ಅಧ್ಯಕ್ಷ ಡಾ. ಸಂತೋಷ್ ಹೇಳಿದರು.ಪಟ್ಟಣದ ಮಲ್ಲಿಕಾರ್ಜುನ ಮೆಡಿಕಲ್ ಮುಂಭಾಗ ದೇಶಭಕ್ತ ಬಳಗದ ವತಿಯಿಂದ ವೀರ ಸಾವರ್ಕರ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ವೀರ ಸಾವರ್ಕರ್‌, ಭಗತ್ ಸಿಂಗ್ ಹಾಗೂ ಸುಭಾಷ್ ಚಂದ್ರ ಬೋಸ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸಮಗ್ರ ಮಾಹಿತಿ ಇಲ್ಲದಿರುವುದು ವಿಷಾದನೀಯ ಸಂಗತಿ. ಬ್ರಿಟಿಷರು ಅವರನ್ನು ಅಂಡಮಾನ್ ನಿಕೋಬಾರ್‌ನ ‘ಕಾಲಾಪಾನಿ’ ಜೈಲಿಗೆ ಕಳುಹಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿದ್ದರು. ಹಿಂದೂ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾವರ್ಕರ್‌ ಅವರು ‘ಪತಿತ ಪಾವನ ಮಂದಿರ’ ನಿರ್ಮಿಸಿ ಸಾಮಾಜಿಕ ಸುಧಾರಣೆಗೆ ಕೈಜೋಡಿಸಿದ್ದರು ಎಂದರು.ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಗಳನ್ನು ಉಲ್ಲೇಖಿಸಿದ ಅವರು, ಆ ಘಟನೆಗಳ ಹಿಂದಿನ ರಾಜಕೀಯ ಮತ್ತು ಸಾಮಾಜಿಕ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಕ್ಷಮಾದಾನ ಪತ್ರಗಳ ಕುರಿತು ಮಾತನಾಡಿದ ಅವರು, ಅದು ಹೇಡಿತನದಿಂದ ಬರೆಯಲ್ಪಟ್ಟದ್ದಲ್ಲ; ಬದಲಾಗಿ ಹೊರಬಂದು ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಲು ಅನುಸರಿಸಿದ ಒಂದು ರಣತಂತ್ರವಾಗಿತ್ತು ಎಂದು ಸಮರ್ಥಿಸಿದರು. ಮಲ್ಲಿಕಾರ್ಜುನ ಮೆಡಿಕಲ್‌ನ ರಾಜಣ್ಣ ಮಾತನಾಡಿ, ಸಮಾಜದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮದ ಮೌಲ್ಯಗಳನ್ನು ಯುವಜನತೆಗೆ ಪರಿಚಯಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೇಶವಮೂರ್ತಿ ಹತ್ವಾರ್, ಗುಂಡಣ್ಣ (ನಾಗರಾಜು), ಮಲ್ಲಿಕಾರ್ಜುನ ಮೆಡಿಕಲ್ ಮಹೇಶ್, ಬಿಜೆಪಿ ಯುವ ಮೋರ್ಚಾದ ಸುಮನ್ ನವಿಲಹಳ್ಳಿ, ಕೋಟೆ ಶ್ರೀನಿವಾಸ್ ಸೇರಿದಂತೆ ಇತರರು ಹಾಜರಿದ್ದರು. ಇದೇ ವೇಳೆ ಮಲ್ಲಿಕಾರ್ಜುನ ಮೆಡಿಕಲ್ ವತಿಯಿಂದ ಚಕ್ರವರ್ತಿ ಸೂಲಿಬೆಲೆ ಬರೆದ ವೀರ ಸಾವರ್ಕರ್ ಜೀವನ ಚರಿತ್ರೆ ಪುಸ್ತಕವನ್ನು ಬಂದಂತ ದೇಶಭಕ್ತರಿಗೆ ಉಚಿತವಾಗಿ ಹಂಚಿದರು.