ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಉಳ್ಳವರು ಬಡವರಿಗೆ ದಾನವನ್ನು ಮಾಡಿ, ಅವರು ಸಹ ಬಕ್ರೀದ್ ಹಬ್ಬವನ್ನು ನೆಮ್ಮದಿ ಮತ್ತು ನಿಶ್ಚಿಂತೆಯಿಂದ ಆಚರಣೆ ಮಾಡುವಂತೆ ಅವಕಾಶ ಕಲ್ಪಿಸಬೇಕು ಎಂದು ಮೌಲಾನ ಅಲಿರಜ ತಿಳಿಸಿದರು.
ಪಟ್ಟಣದ ಅರಕಲಗೂಡು ರಸ್ತೆಯ ಈದ್ಗಾ ಮೈದಾನದಲ್ಲಿ ಗುರುವಾರ ಈದ್-ಉಲ್-ಅಧಾ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದರು. ಈದ್-ಉಲ್-ಅಧಾ ಆಚರಣೆಯಿಂದ ಬಡವರ ಸಂತೋಷದಲ್ಲಿ ದೇವರನ್ನು ಕಾಣಬಹುದು ಮತ್ತು ಅಲ್ಲಾಹ ಕೃಪೆಗೆ ಪಾತ್ರರಾಗಬಹುದು ಎಂದರು. ಸಮಾಜ ಸೇವಕ ಇಲಿಯಾಜ್ ಮಾತನಾಡಿ ಪ್ರವಾದಿ ಕುಟುಂಬದ ಸಂಕಷ್ಟದ ಸರಮಾಲೆ, ಕಷ್ಟಕಾರ್ಪಣ್ಯಗಳು, ಎದುರಿಸಿದ ಸವಾಲುಗಳನ್ನು ಸ್ಮರಿಸುತ್ತಾ, ಪ್ರಾಣಿ ಬಲಿ ಅರ್ಪಿಸುವಿಕೆ, ಉಪವಾಸ, ದಾನ, ಸಮಾನತೆಯ ಸಂದೇಶ ಬಕ್ರೀದ್ ಹಬ್ಬದ ವಿಶೇಷವಾಗಿದೆ. ದೇಶ, ಸ್ಥಾನಮಾನ, ರಾಜ, ರಾಜಕಾರಣಿ, ಪದವಿ, ಬಡವ, ಶ್ರೀಮಂತ, ನಿರ್ಗತಿಕ ಕೂಡ ಈದ್ಗಾ ಮೈದಾನದಲ್ಲಿ ಒಂದೇ ದಿಕ್ಕಿಗೆ ಮುಖ ಮಾಡಿ, ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಮನುಷ್ಯರೆಲ್ಲರೂ ಸಹೋದರರು ಹಾಗೂ ಸಮಾನರು ಎಂಬ ಸಂದೇಶದ ಜತೆಗೆ ಬಡವರಿಗೆ ದಾನ, ಧರ್ಮ ಮಾಡುವುದು ಮತ್ತು ಹಸಿದವರಿಗೆ ಅಹಾರ ನೀಡುವಂಥ ಪುಣ್ಯ ಕಾರ್ಯ ಮಾಡುವ ಮೂಲಕ ಪವಿತ್ರ ಈದ್-ಉಲ್-ಅಧಾ ಹಬ್ಬವನ್ನು ಬಾಂಧವ್ಯದ ಜತೆಗೆ ಸಂಭ್ರಮದಿಂದ ಆಚರಣೆ ಮಾಡುತ್ತೇವೆ ಎಂದರು. ಪ್ರಾರ್ಥನೆಯಲ್ಲಿ ಜಬೀರ್, ಇಮ್ರಾನ್, ಅಹಮದ್, ರಿಯಾಜ್, ಮಹಮದ್ ಖಾಲೀದ್, ನವಾಬ್ ಖಾನ್, ಮುಜಾಹಿದ್ ಖಾನ್, ಮುಕೀಬ್ ಉಲ್ಲಾ, ನದೀಮ್, ಆರೀಫ್, ಹಾಗೂ ಇತರರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.