ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಹೇಮಾವತಿ ನದಿಗೆ ನಿರ್ಮಿಸಿರುವ ಹಳೆಯ ವಾಣಿವಿಲಾಸ ಸೇತುವೆಯು ಶತಮಾನದ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಸೇತುವೆಯನ್ನು ನವೀಕರಣಗೊಳಿಸುವ ಜತೆಗೆ ಇದನ್ನು ಸ್ಮಾರಕವಾಗಿ ಉಳಿಸಬೇಕು ಎಂಬುದು ನಾಗರಿಕರ ಆಶಯವಾಗಿದೆ. ಆದರೆ ಸೇತುವೆಯ ಪಕ್ಕದಲ್ಲೇ ಭೂ ಕುಸಿತ ಉಂಟಾಗಿರುವ ಜತೆಗೆ ದೊಡ್ಡದಾದ ಕಂದಕ ಉಂಟಾಗಿದ್ದು, ಸೇತುವೆಯೇ ಕುಸಿದು ಬೀಳುವ ಆತಂಕ ಸೃಷ್ಠಿಯಾಗಿದೆ.ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರ ಆಡಳಿತ ಅವಧಿಯ ೧೮೯೭ರಲ್ಲಿ ಕಾಮಗಾರಿ ಪ್ರಾರಂಭಗೊಂಡು ೧೮೯೮ರಲ್ಲಿ ನಿರ್ಮಾಣಗೊಂಡು, ಉದ್ಘಾಟಿಸಲಾಗಿತ್ತು. ಈ ಸೇತುವೆಯು ಒಂದು ಕಾಲದಲ್ಲಿ ಹಾಸನ, ಮಂಗಳೂರು, ಧರ್ಮಸ್ಥಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕದ ಕೊಂಡಿಯಾಗಿದ್ದು, ಈಗಲೂ ಸುಸ್ಥಿತಿಯಲ್ಲಿದೆ. ಇಂತಹ ಸೇತುವೆಯನ್ನು ಮತ್ತೆ ನಿರ್ಮಿಸುವುದು ಅಸಾಧ್ಯ ಎಂಬುದನ್ನು ಮನಗಂಡು, ಭೂ ಕುಸಿತ ಆಗಿರುವ ಸ್ಥಳದಲ್ಲಿ ಅಗತ್ಯ ಕ್ರಮಕೈಗೊಂಡು ಹಳೆಯ ಶೈಲಿಯ ಸೇತುವೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ.ಹಾಸನ ಮೈಸೂರು ಹೆದ್ದಾರಿಯಲ್ಲಿ ಹೊಸ ಸೇತುವೆ ನಿರ್ಮಾಣಗೊಂಡಿದ್ದರೂ ಹಳೇ ಸೇತುವೆಯ ಬಳಕೆ (ಸೇವೆ) ಇನ್ನೂ ಮುಂದುವರಿದಿದೆ. ವಾಹನಗಳು ವಿರಳವಾಗಿದ್ದ ಸಂದರ್ಭದಲ್ಲಿ ಎತ್ತಿನಗಾಡಿ ಓಡಾಟದ ಕಾಲದಲ್ಲಿ ನಿರ್ಮಿಸಿದರೂ ಸೇತುವೆ ಬಳಿಕ ಬೃಹತ್ ವಾಹನಗಳು ನಿರಂತರವಾಗಿ ಓಡಾಟ ನಡೆಸಿದರೂ ಯಾವುದೇ ತೊಂದರೆ ಉಂಟಾಗಿರಲಿಲ್ಲ. ಆದರೆ ‘ಹೊಸ ನೀರು ಬಂದಾಗ ಹಳೇ ನೀರು ಹೋಯಿತು’ ಎಂಬ ಗಾದೆಯಂತೆ ಹೊಸ ಸೇತುವೆ ಉದ್ಘಾಟನೆಗೊಂಡ ನಂತರ ನೂರಾರು ವರ್ಷ ಬಳಕೆ ಮಾಡಬಹುದಾಗಿದ್ದ ಸೇತುವೆಯೂ ಇಚ್ಛಾಶಕ್ತಿ ಕೊರತೆ ಹಾಗೂ ಕರ್ತವ್ಯ ನಿಷ್ಠೆ ಇಲ್ಲದ ಕಾರಣದಿಂದ ಸೇತುವೆ ಮೇಲೆ ಗಿಡಗಂಟಿಗಳು ಬೆಳೆದು ಕುಸಿದು ಬೀಳುವ ಸಾಧ್ಯತೆ ಇದೆ. ಈ ಕಾರಣದಿಂದ ಹಳೆ ಸೇತುವೆ ನವೀಕರಣ ಪ್ರಸ್ತಾಪ ಉತ್ತಮವಾಗಿದ್ದು, ಪುರಸಭೆಯಿಂದ ಅದಕ್ಕೆ ಅವಕಾಶ ಇದೆಯೇ ಅಥವಾ ಅವಕಾಶ ಇಲ್ಲದೇ ಇದ್ದರೆ ಸಂಬಂಧಪಟ್ಟ ಇಲಾಖೆಯವರ ಜತೆ ಚರ್ಚಿಸುವುದು ಅತ್ಯಗತ್ಯವಾಗಿದೆ.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರ ಆಡಳಿತ ಅವಧಿಯ ೧೮೯೮ರಲ್ಲಿ ಉದ್ಘಾಟನೆಗೊಂಟು ೧೨೮ ವಸಂತಗಳನ್ನು ಕಂಡಿರುವ ಹೇಮಾವತಿ ನದಿಗೆ ನಿರ್ಮಾಣಗೊಂಡಿರುವ ಹಳೆಯ ವಾಣಿವಿಲಾಸ ಸೇತುವೆಯನ್ನು ನವೀಕರಣಗೊಳಿಸಬೇಕು, ಜತೆಗೆ ಇಂದೊಂದು ಸೇತುವೆ ಎನ್ನುವುದಕ್ಕಿಂತಲೂ ಸ್ಮಾರಕವಾಗಿ ಉಳಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.