ಬಿರ್ಸಾ ಮುಂಡಾ ಆದಿವಾಸಿಗಳ ಸಾಂಸ್ಕೃತಿಕ ಅಸ್ಮಿತೆ

KannadaprabhaNewsNetwork |  
Published : Nov 18, 2026, 02:00 AM IST
ಬಳ್ಳಾರಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಎಸ್ಟಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ಬಿರ್ಸಾ ಮುಂಡಾ ಅವರ 151ನೇ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು.  | Kannada Prabha

ಸಾರಾಂಶ

ಬಿರ್ಸಾ ಮುಂಡಾ ಕೇವಲ ಹೋರಾಟಗಾರರಾಗಿರಲಿಲ್ಲ. ಆದಿವಾಸಿ ಸಮಾಜದಲ್ಲಿನ ಮೌಢ್ಯ, ಮೂಢನಂಬಿಕೆ, ಸಾಮಾಜಿಕ ಅನಿಷ್ಟ ಹಾಗೂ ಶೋಷಣೆಗಳ ವಿರುದ್ಧವೂ ಜಾಗೃತಿ ಮೂಡಿಸಿದರು

ಬಳ್ಳಾರಿ: ಬಿರ್ಸಾ ಮುಂಡಾ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದ ಆದಿವಾಸಿ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಬ್ರಿಟಿಷರ ವಸಾಹತುಶಾಹಿ ಆಡಳಿತ, ಶೋಷಣೆ ಮತ್ತು ಆದಿವಾಸಿಗಳ ಭೂಮಿಯ ಹಕ್ಕುಗಳ ಕಸಿತದ ವಿರುದ್ಧ ಹೋರಾಡಿದ ಧೀರ ನಾಯಕ ಎನಿಸಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಎಸ್ಟಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ಬಿರ್ಸಾ ಮುಂಡಾ ಅವರ 151ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬ್ರಿಟಿಷರ ಆಡಳಿತದಲ್ಲಿ ಆದಿವಾಸಿಗಳು ತಮ್ಮ ಸಾಂಪ್ರದಾಯಿಕ ಭೂಮಿ, ಅರಣ್ಯ ಮತ್ತು ಜೀವನೋಪಾಯದ ಹಕ್ಕು ಕಳೆದುಕೊಳ್ಳುತ್ತಿದ್ದರು. ಜಮೀನ್ದಾರರು, ಲೇವಾದೇವಿದಾರರು ಹಾಗೂ ಬ್ರಿಟಿಷ್ ಅಧಿಕಾರಿಗಳ ಶೋಷಣೆಯಿಂದ ಆದಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ಅನ್ಯಾಯದ ವಿರುದ್ಧ ಬಿರ್ಸಾ ಮುಂಡಾ ಆದಿವಾಸಿಗಳನ್ನು ಸಂಘಟಿಸಿ ಹೋರಾಟಕ್ಕೆ ಕರೆ ನೀಡಿದರು. 1899-1900ರಲ್ಲಿ ಮುನ್ನಡೆಸಿದ ಜನಬಂಡಾಯವು ಉಲ್ಗುಲಾನ್ (ಮಹಾ ದಂಗೆ ಅಥವಾ ಮಹಾ ಕ್ರಾಂತಿ) ಎಂದೇ ಪ್ರಸಿದ್ಧವಾಗಿದೆ ಎಂದು ತಿಳಿಸಿದರು.

ವಿಧಾನಪರಿಷತ್ ವೈ.ಎಂ. ಸತೀಶ್ ಮಾತನಾಡಿ, ಬಿರ್ಸಾ ಮುಂಡಾ ಕೇವಲ ಹೋರಾಟಗಾರರಾಗಿರಲಿಲ್ಲ. ಆದಿವಾಸಿ ಸಮಾಜದಲ್ಲಿನ ಮೌಢ್ಯ, ಮೂಢನಂಬಿಕೆ, ಸಾಮಾಜಿಕ ಅನಿಷ್ಟ ಹಾಗೂ ಶೋಷಣೆಗಳ ವಿರುದ್ಧವೂ ಜಾಗೃತಿ ಮೂಡಿಸಿದರು. ಮುಂಡಾ ಹೋರಾಟವು ಕೇವಲ ಬ್ರಿಟಿಷರ ವಿರುದ್ಧದ ಬಂಡಾಯವಾಗಿರದೆ, ಆದಿವಾಸಿಗಳ ಭೂಮಿ, ಅರಣ್ಯ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾಯತ್ತತೆಯ ಹಕ್ಕುಗಳಿಗಾಗಿ ನಡೆದ ಮಹತ್ವದ ಚಳವಳಿಯಾಗಿತ್ತು ಎಂದರಲ್ಲದೆ, ಆದಿವಾಸಿಗಳು ತಮ್ಮ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ನಂಬಿಕೆ ಮತ್ತು ಅಸ್ಮಿತೆ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಬಿರ್ಸಾ ಮುಂಡಾ ಕೇವಲ 25 ವರ್ಷ ಬದುಕಿದ್ದರೂ ಇತಿಹಾಸದಲ್ಲಿ ಅಜರಾಮರರಾದ ಹೋರಾಟಗಾರ ಎಂದು ನಿರೂಪಿಸಿದರು. ಆದಿವಾಸಿಗಳ ನೀರು, ಅರಣ್ಯ, ಜಮೀನು ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ನಾಯಕರು. ಬ್ರಿಟಿಷರ ಶೋಷಣೆ ಮತ್ತು ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಸಂಘಟಿತ ಹೋರಾಟ ಕಟ್ಟಿದ್ದರು. ಹೀಗಾಗಿ ಮುಂಡಾ ಅವರನ್ನು ಆದಿವಾಸಿಗಳ ಸಾಂಸ್ಕೃತಿಕ ಅಸ್ಮಿತೆ ಮತ್ತು ಸ್ವಾಭಿಮಾನದ ಪ್ರತೀಕ ಎಂದೇ ಕರೆಯಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ದರಪ್ಪ ನಾಯಕ, ಬಿಜೆಪಿ ಜಿಲ್ಲಾ ಮುಖಂಡ ಮುರಹರಗೌಡ ಗೋನಾಳ್, ಪಾಲಿಕೆ ಸದಸ್ಯ ಹನುಮಂತಪ್ಪ, ಪುಷ್ಪಲತಾ, ಭೋಗರಾಜ ಕೊಳಗಲ್ಲು ಸೇರಿದಂತೆ ಪಕ್ಷದ ಸದಸ್ಯರು ಹಾಗೂ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಯುಕ್ತ ಬಲೆಗೆ ಎಸಿ ಕಚೇರಿ ಎಸ್‌ಡಿಎ
ಶಾಂತಿ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು