ಬಿರ್ಸಾ ಮುಂಡಾ ಅನೇಕರಿಗೆ ಮಾದರಿಯಾಗಿದ್ದು, ಅವರನ್ನು ನಾವು ಅನುಕರಣೆ ಮಾಡಬೇಕು. ಅನ್ಯಾಯ ನಿಮಗೆ ಕಾಣಿಸಿದರೆ ಸಾಂವಿಧಾನಿಕವಾಗಿ ಅದರ ವಿರುದ್ಧ ಹೋರಾಡಬೇಕು. ಇಂತಹ ವ್ಯಕ್ತಿಗಳಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ತುಂಬಾ ಇದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷ್ ಸೈನ್ಯಕ್ಕೆ ಸಿಂಹ ಸ್ವಪ್ನವಾಗಿದ್ದರು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್ ಟಿ ಮೋರ್ಚಾದ ವತಿಯಿಂದ ನಡೆದ ಭಗವಾನ್ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿ, ಭಗವಾನ್ ಬಿರ್ಸಾ ಮುಂಡಾ ಅವರು ಬುಡಕಟ್ಟು ಜನಾಂಗದ ಅತ್ಯಂತ ಮಹತ್ವ ಪೂರ್ಣ ಹಾಗೂ ಪ್ರಭಾವಶಾಲಿ ವ್ಯಕ್ತಿ ಎಂದು ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಬ್ರಿಟಿಷ್ ಆಡಳಿತದಿಂದ ಬುಡಕಟ್ಟು ಸಮುದಾಯಕ್ಕೆ ಆಗುತ್ತಿದ್ದ ಅನ್ಯಾಯದ ವಿರುದ್ಧ ದ್ವನಿ ಎತ್ತಿದವರು ಬಿರ್ಸಾ ಮುಂಡಾ. ಬುಡಕಟ್ಟು ಸಮುದಾಯದ ಜನರು ಪ್ರಕೃತಿಯನ್ನು ದೇವರೆಂದು ಆರಾಧಿಸುತ್ತಾರೆ. ಪ್ರಕೃತಿ ಹಾಗೂ ಬುಡಕಟ್ಟು ಜನಾಂಗದವರ ನಡುವೆ ಅವಿನಾಭಾವ ಸಂಬಂಧವಿರುತ್ತದೆ ಎಂದು ಹೇಳಿದರು.
ಬ್ರಿಟಿಷ್ ಆಡಳಿತ ಭೂ ಕಂದಾಯ ಕಾಯ್ದೆ ತಂದಿದ್ದರಿಂದ ಬುಡಕಟ್ಟು ಸಮುದಾಯವನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿತ್ತು. ಆದರೆ ಬಿರ್ಸಾ ಮುಂಡಾ ಅವರು ಬುಡಕಟ್ಟು ಸಮುದಾಯದ ಜನರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಸಮರ ಸಾರಿದರು ಎಂದು ತಿಳಿಸಿದರು.
ಒಬ್ಬ ಸಾಮಾನ್ಯ ಬುಡಕಟ್ಟು ಜನಾಂಗದ ಹುಡುಗ ಬ್ರಿಟಿಷ್ ಆಡಳಿತದ ವಿರುದ್ಧ ದಂಗೆ ಏಳಲು ಅವರ ಅಚಲವಾದ ದೃಢ ನಿರ್ಧಾರ, ದೃಢ ಸಂಕಲ್ಪ ಮತ್ತು ಇಚ್ಛಾ ಶಕ್ತಿ ನಮಗೆಲ್ಲರಿಗೂ ಪ್ರೇರಣೆ ಎಂದರು.
ಬಿರ್ಸಾ ಮುಂಡಾ ಅನೇಕರಿಗೆ ಮಾದರಿಯಾಗಿದ್ದು, ಅವರನ್ನು ನಾವು ಅನುಕರಣೆ ಮಾಡಬೇಕು. ಅನ್ಯಾಯ ನಿಮಗೆ ಕಾಣಿಸಿದರೆ ಸಾಂವಿಧಾನಿಕವಾಗಿ ಅದರ ವಿರುದ್ಧ ಹೋರಾಡಬೇಕು. ಇಂತಹ ವ್ಯಕ್ತಿಗಳಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ತುಂಬಾ ಇದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರಮೋದಿಯವರು 2021ರಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15ಅನ್ನು ಪ್ರತಿವರ್ಷ ಜನಜಾತಿಯ ಗೌರವ ದಿವಸ್‌ವಾಗಿ ಘೋಷಿಸಿದ್ದು, ದೇಶದ್ಯಾಂತ ಬಿರ್ಸಾ ಮುಂಡಾ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಬುಡಕಟ್ಟು ಸಮುದಾಯದ ಮುಖಂಡರಾದ ಲಿಂಗೇಗೌಡ, ಇತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಯಸುಂದರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶಂಕರ್, ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಬುಲೆಟ್ ಚಂದ್ರು, ಮುಖಂಡ ವೇಣುಗೋಪಾಲ್, ಕೋಶಾಧ್ಯಕ್ಷ ರಘು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಾಗೇಶ್ ಮಾಸ್ಟರ್, ರಾಜೇಶ್, ಪ್ರಶಾಂತ್, ಸ್ವಾಮಿ, ಅರ್ಜುನ, ನವೀನ್,ಚೇತನ್, ನಂದೀಶ್ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.