ವಿಜಯಪುರ: ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ನಾವು ಅವರ ಕನಸುಗಳನ್ನು ನನಸು ಮಾಡಬೇಕು. ಮಕ್ಕಳ ಏಳಿಗೆ ಎಂದರೆ ಕೇವಲ ಪರೀಕ್ಷೆಯಲ್ಲಿ ಅಂಕ ಪಡೆಯುವುದಲ್ಲ. ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯ, ಆತ್ಮವಿಶ್ವಾಸ ಬೆಳೆಸುವುದು ಎಂದು ಕಾಂಗ್ರೆಸ್ ಮುಖಂಡ ಕೆ.ಎಂ.ಮಧು ಹೇಳಿದರು.
ಮುಖ್ಯಶಿಕ್ಷಕ ರಾಜುಹವಳೇಕರ್ ಮಾತನಾಡಿ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಕಳ್ಳಸಾಗಾಣಿಕೆ ಇಂತಹ ಪಿಡುಗುಗಳ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ಮಕ್ಕಳಿಗೆ ತೊಂದರೆಯಾದರೆ ಮಕ್ಕಳ ಸಹಾಯವಾಣಿ ೧೦೯೮ ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಕ್ಕಳು ಭಯವಿಲ್ಲದೆ ತಮ್ಮ ಸಮಸ್ಯೆ ಹೇಳಿಕೊಳ್ಳುವಂತಹ ಸುರಕ್ಷಿತ ವಾತಾವರಣ ಕಲ್ಪಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕಿ ಮಾಧವಿ ಮಾತನಾಡಿ, ವಿಜ್ಞಾನವೆಂದರೆ ಕೇವಲ ಸೂತ್ರವಲ್ಲ, ಅದು ಪ್ರಶ್ನೆ ಕೇಳುವ, ಪ್ರಯೋಗ ಮಾಡುವ, ಕಾರಣ ಹುಡುಕುವ ಮನೋಭಾವ. ಕೃತಕ ಬುದ್ಧಿಮತ್ತೆ, ಕಂಪ್ಯೂಟರ್, ಬಾಹ್ಯಾಕಾಶ ವಿಜ್ಞಾನ - ಇವೆಲ್ಲವೂ ನಮ್ಮ ಬದುಕನ್ನು ಬದಲಿಸಿವೆ. ಗ್ರಾಮೀಣ ಹೆಣ್ಣುಮಕ್ಕಳು ಕೂಡ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ.ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದರು. ಸಮಾಜ ಸೇವಕ ಗಿರೀಶ್ ವಿದ್ಯಾರ್ಥಿನಿಯರಿಗೆ ನಗದು ಪ್ರೋತ್ಸಾಹಧನ ನೀಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಣೆ ಮಾಡಿದರು.
(ಫೋಟೊ ಕ್ಯಾಪ್ಞನ್)